NEWSನಮ್ಮರಾಜ್ಯರಾಜಕೀಯಸಂಸ್ಕೃತಿ

ಸಿದ್ದರಾಮಯ್ಯ ಆರೋಪ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂದೆ ಸರ್ಕಾರದ ಭಾರಿ ಷಡ್ಯಂತ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಭಾರಿ ಷಡ್ಯಂತ್ರ ಅಡಗಿದೆ. ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಗಣಿ ಹಗರಣಕ್ಕಿಂತ ದೊಡ್ಡದು. ಇದರಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಜಮೀನ್ದಾರಿ ಹಾಗೂ ಜಹಗೀರು ಪದ್ಧತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಕೃಷಿ ನಾಶವಾಗುವುದರ ಜತೆಗೆ ರೈತರು ನಿರ್ಗತಿಕರಾಗಿ ಆಹಾರದ ಸ್ವಾವಲಂಬನೆ ಸಂಪೂರ್ಣವಾಗಿ ಹೋಗುತ್ತದೆ. ಸರ್ಕಾರಕ್ಕೆ ಸದುದ್ದೇಶ ಇದ್ದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ವಿವರಣೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಕೊರೊನಾದಂಥ ಸಂಕಷ್ಟದ ಸಮಯವನ್ನು ದುರುಪಯೋಗಪಡಿಸಿಕೊಂಡು ಭೂ ಸುಧಾರಣೆ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ತಿದ್ದುಪಡಿ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭೂ ಸುಧಾರಣೆಯ ಹೋರಾಟದಲ್ಲಿ ಪಾಲ್ಗೊಂಡಿರುವ ಅನೇಕ ಹಿರಿಯ ಹೋರಾಟಗಾರರು ನಮ್ಮ ನಾಡಿನಲ್ಲಿ, ನಮ್ಮ ಪಕ್ಷದಲ್ಲಿ ಇದ್ದಾರೆ, ಈಗಿನ ಪ್ರತಿರೋಧದಲ್ಲಿ ಭಾಗಿಯಾಗಿರುವ ರೈತ ಮತ್ತು ದಲಿತ ಸಂಘಟನೆಗಳ ನಾಯಕರಿದ್ದಾರೆ. ಇವರೆಲ್ಲರ ಜತೆ ಸಮಾಲೋಚನೆ ನಡೆಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ನಿರ್ಧರಿಸುತ್ತೇವೆ ಎಂದು ವಿವರಿಸಿದರು.

ಈ ಆಂದೋಲನದ ವಿವರವನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಗಮನಕ್ಕೆ ತಂದು ಅವರ ಮಾರ್ಗದರ್ಶನ ಕೂಡಾ ಪಡೆಯಲು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ಹೋರಾಟ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದರ ಹಿಂದೆ ಬೇರೆಯೇ ಉದ್ದೇಶವಿದೆ. ಕೈಗಾರಿಕೆಗಳು ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮೀಸಲು ಸೌಲಭ್ಯ ಒದಗಿಸಬೇಕು. ಖಾಸಗಿಯವರ ವಶಕ್ಕೆ ಕೊಟ್ಟರೆ ಮೀಸಲು ಸೌಲಭ್ಯವೇ ಇರುವುದಿಲ್ಲ. ನೇರವಾಗಿ ಮೀಸಲಾತಿ ತೆಗೆದರೆ ಜನ ದಂಗೆ ಏಳುತ್ತಾರೆ ಎಂಬುದು ಅವರಿಗೂ ಗೊತ್ತು ಎಂದು ಕಿಡಿಕಾರಿದ್ದಾರೆ.

ನಮ್ಮ ಸರ್ಕಾರ ಇದ್ದಾಗ ಬಂಡವಾಳ ಹೂಡಿಕೆಯಾಗುತ್ತಿರಲಿಲ್ಲವೇ? ಹೂಡಿಕೆಯಲ್ಲಿ ಕರ್ನಾಟಕ ನಂ. 1 ಅಥವಾ 2ನೇ ಸ್ಥಾನದಲ್ಲಿ ಇರಲಿಲ್ಲವೇ? ಬೇರೆ ಯಾವ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿಲ್ಲವೇ? ಬೇರೆ ಮಾರ್ಗದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸರ್ಕಾರದಿಂದ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದರು, ಬಂಡವಾಳ ಹೂಡಿಕೆ ಆಗುತ್ತಿರಲಿಲ್ಲ, ಯಾರು ಬೇಕಾದರೂ ಜಮೀನು ಖರೀದಿಸಿ ಕೃಷಿ ಮಾಡಬಹುದು ಎಂಬ ಕಾರಣಗಳನ್ನು ನೀಡಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದಿದೆ. ಆದರೆ ವಾಸ್ತವವೇ ಬೇರೆ. ಇದರ ಹಿಂದೆ ಪ್ರಧಾನಿ ಮೋದಿ ಅವರ ಅವರ ಕುಮ್ಮಕ್ಕಿದೆ ಎಂದು ದೂರಿದ್ದಾರೆ.

ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆ ಭೂಮಿಯನ್ನು ಮಾತ್ರ ಕುಟುಂಬವೊಂದು ಗರಿಷ್ಠ ಪ್ರಮಾಣದಲ್ಲಿ ಹೊಂದಬಹುದಾಗಿದೆ. ಆದರೆ ಈಗಿನ ತಿದ್ದುಪಡಿಯ ನಂತರ ಕರ್ನಾಟಕದಲ್ಲಿ 432 ಎಕರೆ (40 ಯುನಿಟ್) ಭೂಮಿಯನ್ನು ಹೊಂದಬಹುದು ಎಂದರು.

ಬೆಂಗಳೂರಿನ ಗೃಹನಿರ್ಮಾಣ ಸಹಕಾರ ಸಂಘಗಳ ಹೆಸರಲ್ಲಿ ಅಕ್ರಮವಾಗಿ ಮಧ್ಯವರ್ತಿಗಳಿಂದ ಖರೀದಿಸಿದ್ದ ಕಾರಣಕ್ಕೆ ಸೆಕ್ಷನ್ 79ಎ ಮತ್ತು 79ಬಿ ಗೆ ಸಂಬಂಧಿಸಿದ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ.

ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಬೆಂಗಳೂರಿನ ಗೃಹನಿರ್ಮಾಣ ಸಹಕಾರ ಸಂಘಗಳ ಮೇಲಿರುವ ಎಲ್ಲ ಬಾಕಿ ಪ್ರಕರಣಗಳು ರದ್ದಾಗಲಿವೆ. ಈ ಪ್ರಕರಣಗಳು ಒಳಗೊಂಡಿರುವ ಜಮೀನಿನ ಬೆಲೆ ಅಂದಾಜು ರೂ.15 ರಿಂದ 20 ಸಾವಿರ ಕೋಟಿಗಳಷ್ಟಾಗಬಹುದು ಎಂದು ರಾಜ್ಯದ ಸಹಕಾರ ಇಲಾಖೆ ಆಡಿಟ್ ವರದಿ ಹೇಳಿದೆ ಎಂದು ತಿಳಿಸಿದ್ದಾರೆ.

1974ರ ಭೂಸುಧಾರಣಾ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿ ಸುಮಾರು 25 ಲಕ್ಷ ಗೇಣಿದಾರ ಕುಟುಂಬಗಳು ಭೂಮಿಯ ಒಡೆಯರಾಗಿದ್ದರು. ಈ ರೀತಿಯ ಸಮಾನ ಭೂ ಹಂಚಿಕೆಯ ಮೂಲಕ ರಾಜ್ಯದಲ್ಲಿ ಪ್ರಾರಂಭವಾಗಿದ್ದ ಸಾಮಾಜಿಕ ನ್ಯಾಯದ ಹೊಸ ಶಕೆಯನ್ನು ರಾಜ್ಯದ ಬಿಜೆಪಿ ಸರ್ಕಾರ ನಾಶ ಮಾಡಲು ಹೊರಟಿದೆ.

ಕೃಷಿಭೂಮಿ ಹೊಂದಲು ಆದಾಯ ಮೀತಿ ಹೇರಿದ್ದ ಸೆಕ್ಷನ್ 79ಎ, ಕೃಷಿಕರಲ್ಲದವರಿಗೆ ಭೂಮಿ ಖರೀದಿ ನಿಷೇಧಿಸಿದ್ದ 79 ಬಿ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದವರಿಗೆ ದಂಡ ವಿಧಿಸಿದ್ದ ಸೆಕ್ಷನ್ 79ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80 ಅನ್ನು ರದ್ದುಪಡಿಸಿರುವುದು ಭೂಮಿತಾಯಿಗೆ ಬಗೆದ ದ್ರೋಹ.

ಮುಖ್ಯಮಂತ್ರಿ ಯಡಿಯೂರಪ್ಪ  ಅವರ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆ ಮೂಲಕ ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಿ ಕಾಯ್ದೆಯ ಕತ್ತು ಹಿಚುಕಿ ಸಾಯಿಸಿ ಉಳುವವರಿಂದ ಭೂಮಿ ಕಿತ್ತುಕೊಂಡು, ಉಳ್ಳವರನ್ನು ಭೂಮಿಯ ಒಡೆಯರನ್ನಾಗಿ ಮಾಡಲು ಹೊರಟಿದೆ. ಈ ದಿನ ರಾಜ್ಯದ ಇತಿಹಾಸದಲ್ಲಿ ಕರಾಳ ದಿನ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು