ನ್ಯೂಡೆಲ್ಲಿ: ಕೊರೊನಾ ವೈರಸ್ ಬಳಿಕ ಅಂಫಾನ್ ಚಂಡಮಾರುತಕ್ಕೆ ನಲುಗಿ ಹೋಗಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ 1000 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಈ ವರೆಗೂ 77 ಮಂದಿ ಮೃತಪಟ್ಟಿದ್ದು, ಅನೇಕ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಲ್ಲಿನ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಈ ಎಲ್ಲವನ್ನು ಅವಲೋಕಿಸಿ ಪರಿಹಾರ ಕಾರ್ಯ ಹಾಗೂ ಮರು ನಿರ್ಮಾಣ ಕಾರ್ಯಗಳಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸದಾಕಾಲ ಪಶ್ಚಿಮಬಂಗಾಳದ ಜತೆಗೆ ನಿಲ್ಲಲಿದೆ. ಪಶ್ಚಿಮ ಬಂಗಾಳ ಮುನ್ನಡೆಯುವದಷ್ಟೇ ನಮಗೆ ಬೇಕು. ಮತ್ತಷ್ಟು ವೈಮಾನಿಕ ಸಮೀಕ್ಷೆಗಾಗಿ ಕೇಂದ್ರ ಶೀಘ್ರದಲ್ಲಿಯೇ ತಂಡವೊಂದನ್ನು ರವಾನಿಸಲಿದ್ದು, ಈ ತಂಡವು ನಷ್ಟವನ್ನು ಲೆಕ್ಕಹಾಕಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಚಂಡಮಾರುತದಿಂದ ಉಂಟಾಗಿರುವ ಹಾನಿ ಕುರಿತು ಪರೀಶಿಲನೆ ನಡೆಸಲು ಇಂದು ಬೆಳಗ್ಗೆ ಮೋದಿಯವರು ಪಶ್ಚಿಮ ಬಂಗಾಳ ತಲುಪಿದ್ದರು. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಖರ್ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದರು. ಬಳಿಕ ಮೋದಿಯವರು ಸಿಎಂ ಮಮತಾ ಹಾಗೂ ರಾಜ್ಯಪಾಲ ಧಂಖರ್ ಜತೆಗೆ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿರುವ ದಕ್ಷಿಣ ಬಂಗಾಳದಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ, ನಷ್ಟದ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಶ್ಚಿಮ ಬಂಗಾಳಕ್ಕೆ 1000 ರೂ. ಗಳ ಭರವಸೆಯನ್ನು ನೀಡುತ್ತಿದ್ದೇವೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಕುಟುಂಬಕ್ಕೆ .2 ಲಕ್ಷ ರೂ. ಹಾಗೂ ಗಾಯಾಳುಗಲಿಗೆ 50,000 ರೂ. ಪರಿಹಾರ ನೀಡಲಾಗುತ್ತದೆ ಎಂದು ಮೋದಿಯವರು, ಹೇಳಿದ್ದಾರೆ.
ಕೊರೊನಾ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಕೆಲ ರಾಜ್ಯಗಳಲ್ಲಿ ಚಂಡಮಾರುತಗಳು ಎದುರಾಗಿವೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಮಾಜಿಕ ದೂರ ಅಗತ್ಯವಿದೆ, ಆದರೆ ಚಂಡಮಾರುತದ ವಿರುದ್ಧ ಹೋರಾಡಲು ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗಬೇಕಾಗಿದೆ. ಈ ಎಲ್ಲಾ ಸಂಕಷ್ಟಗಳ ನಡುವಲ್ಲೂ ಪಶ್ಚಿಮ ಬಂಗಾಳ ಉತ್ತಮವಾಗಿ ಹೋರಾಟ ನಡೆಸುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನಾವೆಲ್ಲರೂ ಪಶ್ಚಿಮ ಬಂಗಾಳ ಜನತೆಯ ಬೆಂಬಲಕ್ಕೆ ನಿಲ್ಲುತ್ತೇವೆಂದು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail