ಹುಬ್ಬಳ್ಳಿ: ಕಳೆದ 2021ರ ಏಪ್ರಿಲ್ನಲ್ಲಿ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ಅನೇಕರು ವಜಾ, ಅಮಾನತು, ವರ್ಗಾವಣೆ ಆದವರು ತಮ್ಮ ವಾಯುವ್ಯ ಸಾರಿಗೆಯಲ್ಲಿ ಇನ್ನೂ ಮೂಲ ಘಟಕಕ್ಕೆ ಮರಳುವ ಆದೇಶಗಳು ಸಂಪೂರ್ಣವಾಗಿ ಆಗಿಲ್ಲ ಎಂಬ ಆರೋಪವನ್ನು ನೌಕರರು ಮಾಡುತ್ತಿದ್ದಾರೆ.
ಅದರಲ್ಲೂ ಅಮಾನತಾಗಿ ಬೇರೆ ಘಟಕಕ್ಕೆ ಹೋಗಿದ್ದವರನ್ನು ಮೂಲ ಘಟಕಕ್ಕೆ ವರ್ಗಾವಣೆ ಮಾಡಲು ಇನ್ನೂ ಕೂಡ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆಎ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ವಜಾ, ಅಮಾನತು, ವರ್ಗಾವಣೆ ಆದವರಲ್ಲಿ ಕೆಲವರು ವಿಧಿ ಇಲ್ಲದೆ ಹಣ ಕೊಟ್ಟು ಮೂಲ ಘಟಕಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ದೂರುಗಳು ನೌಕರರ ಮೊಗಶಾಲೆಯಲ್ಲಿ ಹರಿದಾಡುತ್ತಿದೆ.
ಇನ್ನು ನಾವು ಯಾವುದೇ ಹಣ ಕೊಡುವುದಿಲ್ಲ ನಮ್ಮನ್ನು ಮೂಲ ಘಟಕ್ಕೆ ವರ್ಗಾವಣೆ ಮಾಡಿ ಎಂದು ಕೇಳುತ್ತಿರುವ ನೌಕರರು ಅನೇಕ ರೀತಿಯ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ನೌಕರ ವಿರೋಧಿ ನೀತಿ ಅನುಸರಿಸುತ್ತಿದ್ದು ಈಗಾಗಲೇ ಎಲ್ಲ ಅಧಿಕಾರಿಗಳು ವರ್ಗಾವಣೆಗೆ ಆದೇಶ ಮಾಡಿದ್ದಾರೆ ಆದರೆ ಸಿಟಿಎಂ ಅವರು ಮಾತ್ರ ವರ್ಗಾವಣೆಗೆ ಸಹಿ ಮಾಡದೆ ತಮ್ಮ ರಾಗ ಬದಲಾಯಿಸಿದ್ದಾರೆ ಎಂದು ನೌಕರರು ದೂರುತ್ತಿದ್ದಾರೆ.
ಈವರೆಗೂ ನೌಕರರ ಸಮಸ್ಯೆಗಳನ್ನು ಬಗೆ ಹರಿಸಿ ಕೊಡುತ್ತೇನೆ ಎಂದು ಹೇಳುತ್ತಾ ಹೇಳುತ್ತಲೇ ನೌಕರರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು,ಕೆಲ ಸಂಘಟನೆಗಳ ಮುಖಂಡರ ಮಾತು ಕೇಳಿಕೊಂಡು ಸಿಟಿಎಂ ಅವರು ನೌಕರರ ಪಾಲಿಗೆ ಮುಳ್ಳಾಗಿದ್ದಾರೆ ಎಂದು ನೊಂದ ನೌಕರರ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಕೂಟದದ ಪದಾಧಿಕಾರಿಗಳನ್ನು ಕರೆದು ಒಂದು ವಾರದೊಳಗೆ KKRTC ಮತ್ತು KSRTC ಆದೇಶಗಳ ಪಾಲನೆ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಆದರೆ, ಮಾತು ಕೊಟ್ಟ ಅಧಿಕಾರಿಗಳು ಒಂದು ವಾರ ಕಳೆದ ಬಳಿಕ ನಮಗೇನು ಗೊತ್ತೇ ಇಲ್ಲ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ವಿಭಾಗ ಮಟ್ಟದ ಅಧಿಕಾರಿಗಳು ಈಗಾಗಲೇ ಕೆಲವರ ಕನಿಷ್ಠ ಬೇಸಿಕ್ ಮಾಡಿದಲ್ಲದೆ, ಇನ್ನೊಂದು ವಿಭಾಗದಲ್ಲಿ 1-2 ಇನ್ಕ್ರಿಮೆಂಟ್ ಶಾಶ್ವತವಾಗಿ ತೆಗೆದು ಹಾಕಿ ಆದೇಶ ಮಾಡಿದ್ದಾರೆ ಹಾಗೂ ಕೆಲವು ಘಟಕದ ವ್ಯವಸ್ಥಾಪಕರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಡಿಎಂ ವರದಿಕೊಟ್ಟು ಕೆಲವರನ್ನು ಅಮಾನತು ಮಾಡಲಾಗಿದೆ. ಹೀಗೆ ಅಧಿಕಾರಿಗಳ ದರ್ಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಸಿಟಿಎಂ ಅವರೇ ಕಾರಣ ಎಂದು ನೌಕರರು ಆರೋಪಿಸಿದ್ದಾರೆ.
ಇಷ್ಟೆಲ್ಲ ಆದ ಮೇಲೆ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದ ಸಿಟಿಎಂ ಅವರನ್ನು ವರ್ಗಾವಣೆ ಮಾಡಿ ನೌಕರರನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ. ಇನ್ನು ವಾಯುವ್ಯ ಸಾರಿಗೆ ನೌಕರರು ಸಿಟಿಎಂ ವಿರುದ್ದ ಸಿಡಿದೇಳುವ ಮುನ್ನ ಸರ್ಕಾರ ಮತ್ತು ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕು ಎಂ ಎಚ್ಚರಿಕೆಯನ್ನು ನೀಡಿದ್ದಾರೆ.