ಶಿವಮೊಗ್ಗ: ಬಸ್ ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿ ಆಯತಪ್ಪಿ ಕೆಳಗೆ ಬಿದ್ದ ಮಹಿಳೆ ಮೇಲೆ NWKRTC ಬಸ್‌ನ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸಮೀಪದ ಹೊಳೆಬಾಗಿಲುವಿನಲ್ಲಿ ಜರುಗಿದೆ.
ಧಾರವಾಡ ಜಿಲ್ಲೆಯ ಕಲಘಟಕಿ ತಾಲೂಕಿನ ಸೋಮಿನಕೊಪ್ಪ ಗ್ರಾಮದ ನಿವಾಸಿ ಮಂಜುಳಾ (38) ಅವಘಡದಲ್ಲಿ ಮೃತಪಟ್ಟವರು.
ಘಟನೆ ವಿವರ: ಶುಕ್ರವಾರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹತ್ತುವ ಭರದಲ್ಲಿ ವಾಹನದ ಚಕ್ರದಡಿ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾರೆ.
ಹೊಳೆಬಾಗಿಲಿನ ಅಂಬಾರಗೋಡ್ಲು ಹತ್ತರ ಈ ಘಟನೆ ಸಂಭವಿಸಿದೆ. ಶುಕ್ರವಾರ ಲಾಂಚ್‌ನಿಂದ ಬಂದು ಸಾಗರ ಕಡೆಗೆ ಹೊರಟಿದ್ದ ಬಸ್‌ಗೆ ಹತ್ತಲು ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಮಂಜುಳಾ ಕೂಡ ಬಸ್ ಹತ್ತಲು ಹೋಗಿದ್ದಾರೆ. ಆದರೆ ಹಿಡಿದುಕೊಳ್ಳಲು ಗ್ರಿಪ್ ಸಿಗದೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್ ಮುಂದಕ್ಕೆ ಚಲಿಸಿದ್ದರಿಂದ ಹಿಂದಿನ ಚಕ್ರದಡಿ ಸಿಲುಕಿ ಕೊನೆಯುಸಿರೆಳೆದ್ದಿದ್ದಾರೆ.
ಸಿಗಂದೂರಿಗೆ ಬಂದಿದ್ದು ದರ್ಶನ ಮುಗಿಸಿ ವಾಪಸ್ ಸ್ವ ಗ್ರಾಮಕ್ಕೆ ಹೋಗಲು ಕುಟುಂಬ ಸದಸ್ಯರ ಜೊತೆಗೆ ಬಸ್ ಹತ್ತಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.
ಸಾರಿಗೆ ನಿಗಮಗಳ ಬಸ್‌ಗಳು ಉಚಿತ ಪ್ರಯಾಣ ಆರಂಭವಾದ ದಿನದಿಂದಲೂ ಮಹಿಳೆಯರಿಂದ ರಶ್ ಆಗುತ್ತಿವೆ. ಅಲ್ಲದೆ ಬಸ್ ಹತ್ತಿ ಸೀಟು ಹಿಡಿಯುವ ಸಂಬಂಧ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹೀಗೆ ಉಂಟಾದ ರಶ್‌ನಿಂದ ಈ ಘಟನೆ ನಡೆದಿದ್ದು, ಇನ್ನಾದರೂ ಮಹಿಳೆಯರು ಈ ಬಗ್ಗೆ ಎಚ್ಚರವಹಿಸಬೇಖಿದೆ.
ಶುಕ್ರವಾರದಂದು ಸಹಜವಾಗಿಯೇ ಸಿಗಂದೂರಿಗೆ ಆಗಮಿಸುವ ಮಹಿಳೆಯರ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಬಸ್ ಓಡಿಸಿದರೆ ಇಂಥ ಅವಘಡಗಳನ್ನು ತಪ್ಪಿಸಬಹುದು ಎಂದು ಸ್ಥಳೀಯರು ಸಾರಿಗೆ ನಿಗಮದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.