ಸಾಗರ: ಮಳೆಯ ನಡುವೆಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಸಾಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಭಟ್ಕಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಭಟ್ಕಳ ಘಟಕದ ಬಸ್ ಸಾಗರ ಬಳಿ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸಿನಲ್ಲಿದ್ದ 12 ಪ್ರಯಾಣಿಕರನ್ನು ಕೆಳಗಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಬಸ್ ಬಹುತೇಕ ಬೆಂಕಿಗಾಹುತಿ ಆಗಿದೆ. ಏಕಾಏಕಿ ಬಸ್ನ ಇಂಜಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಂಡಕ್ಟರ್ ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬಸ್ ಹೊತ್ತಿ ಉರಿದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
BMTC: ರಾತ್ರಿ ಏಕಾಏಕಿ ಧಗಧಗಿಸಿದ ಎಲೆಕ್ಟ್ರಿಕ್ ಬಸ್: ಇನ್ನು ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಸರ್ವೀಸ್ ರೋಡ್ನಲ್ಲಿ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಧಗಧಗಿಸಿ ಉರಿದು ಭಸ್ಮವಾದ ಘಟನೆ ಸೋಮವಾರರಾತ್ರಿ 11:30 ಸುಮಾರು ಸಮಯದಲ್ಲಿ ಸಂಭವಿಸಿದ್ದು ಈ ಬೆನ್ನಲ್ಲೇ NWKRTC ಬಸ್ ಹೊತ್ತಿ ಉರಿದಿರುವುದು ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ.
ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಎಲೆಕ್ಟ್ರಿಕ್ ಮತ್ತು ಡೀಸೆಲ್ ವಾಹನಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿಯುತ್ತಿರುವುದು ಸಾಮಾನ್ಯ ಎಂಬಂತಾಗಿದ್ದು ಅದು ದಿಢೀರ್ ಬೆಂಕಿ ಕಾಣಿಸಿಕೊಂಡು ಭಸ್ಮವಾಗುತ್ತಿರುವುದು ಭಯ ಮತ್ತು ಆತಂಕಕ್ಕೆ ಕಾರಣವಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ತಾಂತ್ರಿಕ ವಿಭಾಗದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬಸ್ಗಳಲ್ಲಿ ಆಗುತ್ತಿರುವ ಸಮಸ್ಯೆಯನ್ನು ಗುರುತಿಸಿ ಅವುಗಳನ್ನು ಸರಿಪಡಿಸಬೇಕಿದೆ ಎಂದು ಸಾರ್ವಜನಿಕ ಪ್ರಯಾಣಿಕರು ಅಗ್ರಹಿಸಿದ್ದಾರೆ.
ಇನ್ನು ಬಸ್ ದುರಸ್ಥಿಗೊಂಡಿರುವ ಬಗ್ಗೆ ಚಾಲಕರು ದೂರು ನೀಡಿದರೆ ಅಂಥ ಚಾಲಕರನ್ನೇ ಹೊಣೆಗಾರರನ್ನಾಗಿ ಮಾಡಿ ಬಳಿಕ ಅಮಾನತು ಇಲ್ಲ ವರ್ಗಾವಣೆ ಮಾಡುತ್ತಿರುವುದರಿಂದ ಚಾಲಕರು ಕೂಡ ಬಸ್ ದುರಸ್ಥಿ ಬಗ್ಗೆ ಯಾವುದೇ ದೂರು ದಾಖಲಿಸುತ್ತಿಲ್ಲ. ಪರಿಣಾಮ ಬಸ್ಗಳು ಈ ರೀತಿ ರಸ್ತೆಯಲ್ಲಿ ಬೆಂಕಿಗೆ ಆಹುತಿಯಾಗುತ್ತಿವೆ ಎಂದು ಕೆಲ ನೌಕರರು ಆರೋಪಿಸುತ್ತಿದ್ದಾರೆ.
ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಗಮನಹರಿಸಿ ಬಸ್ನಲ್ಲಿ ಉಂಟಾಗುವ ಸಮಸ್ಯೆಯನ್ನು ಮುಕ್ತವಾಗಿ ಚಾಲಕರು ಹೇಳಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಇಲ್ಲದಿದ್ದರೆ ಈ ಸಮಸ್ಯೆ ನಿರಂತರವಾಗಿ ಇರಲಿದೆ ಎಂದು ಚಾಲನಾ ಸಿಬ್ಬಂದಿ ಹೇಳುತ್ತಿದ್ದು, ಏನೆ ಅವಘಡ ಸಂಭವಿಸಿದರೂ ಅದಕ್ಕೆ ಅಧಿಕಾರಿಗಳನ್ನೇ ನೇರಹೊಣೆಗಾರರನ್ನಾಗಿ ಮಾಡಬೇಕು ಎಂದು ಸಚಿವರನ್ನು ಒತ್ತಾಯಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)