ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಜುಲೈ 1ರಿಂದ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದಾಗಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಅವೈಜ್ಞಾನಿಕವಾಗಿ ಟೋಲ್ ದರ ನಿಗದಿಪಡಿಸಿದೆ. ಇದು ಸರಿಯಲ್ಲ ಎಂದು ಜಿಲ್ಲಾ ಕೆಪಿಸಿಸಿ ವಕ್ತಾರ, ವಕೀಲ ಟಿ.ಎಸ್. ಸತ್ಯಾನಂದ ಕಿಡಿಕಾರಿದ್ದಾರೆ.
ಇನ್ನು ಹೇಳಬೇಕೆಂದರೆ ಸರ್ವೀಸ್ ರಸ್ತೆ ಕಾಮಗಾರಿ ಮುಗಿಯದಿದ್ದರೂ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ಚಿಂತಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು-ಮೈಸೂರು ನಡುವೆ ಶೇ.30ರಷ್ಟು ಜನರು ಮಾತ್ರ ಸಂಚರಿಸುತ್ತಾರೆ. ಉಳಿದ ಶೇ.70ರಷ್ಟು ಜನರು ಸ್ಥಳೀಯರೇ ಆಗಿದ್ದಾರೆ. ಅವರೆಲ್ಲರೂ ಮಾರ್ಗ ಮಧ್ಯದ ನಗರ/ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಾರೆ. ಶೇ.30ರಷ್ಟು ಜನರಿಗಾಗಿ ಎಂಟತ್ತು ಸಾವಿರ ಕೋಟಿ ರೂ. ಖರ್ಚು ಮಾಡಿ ಹೆದ್ದಾರಿ ನಿರ್ಮಿಸಲಾಗಿದೆ. ಇದರ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಪ್ರಸ್ತುತ ನಿಗದಿಪಡಿಸಿರುವ ಟೋಲ್ ಶುಲ್ಕವನ್ನು ನೋಡಿದರೆ ಟೋಲ್ ಕೇಂದ್ರಗಳು ಸುಲಿಗೆ ಕೇಂದ್ರಗಳಾಗಲಿವೆ ಎನಿಸುತ್ತಿದೆ. ಟೋಲ್‌ನಲ್ಲಿ ಬಡ, ಮಧ್ಯಮ ವರ್ಗದ ಜನರಿಂದ ಹಗಲು ದರೋಡೆ ನಡೆಯುತ್ತಿದೆ. ಟೋಲ್ ಪಾವತಿಸಿದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮೂಲ ಸೌಕರ್ಯಗಳಿಲ್ಲ. ಇಂಡಿಯನ್ ರೋಡ್ಸ್ ಕಾಂಗ್ರೆಸ್ (ಐಆರ್‌ಸಿ)ನ ಬಹುತೇಕ ನಿಯಮಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾಲಿಸಿಲ್ಲ ಎಂದು ದೂರಿದರು.
ಮಂಡ್ಯ ತಾಲೂಕು ಉಮ್ಮಡಹಳ್ಳಿ ಗೇಟ್, ವಿ.ಸಿ. ಫಾರ್ಮ್ ಬಳಿ ಸರ್ವೀಸ್ ರಸ್ತೆ, ಅಂಡರ್ ಪಾಸ್ ಕಾಮಗಾರಿ ಮುಗಿದಿಲ್ಲ. ಬೆಂಗಳೂರು-ಮೈಸೂರು ನಡುವಿನ ನಗರ, ಪಟ್ಟಣಗಳಿಗೆ ಆಗಮನ ಹಾಗೂ ನಿರ್ಗಮದ ವ್ಯವಸ್ಥೆ ಸರಿಯಾಗಿಲ್ಲ. ಮದ್ದೂರು ಪಟ್ಟಣದೊಳಗೆ ಪ್ಲೈಓವರ್ ಮೂಲಕ ಹೆದ್ದಾರಿ ಹಾದು ಹೋಗಿದೆ.
ಆದರೆ, ಹೆದ್ದಾರಿ ಕೆಳಗಿನ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಇಷ್ಟೆಲ್ಲಾ ಇದ್ದರೂ ಸಂಸದ ಪ್ರತಾಪ್ ಸಿಂಹ ಅವರು ಹೆದ್ದಾರಿ ನಿರ್ಮಾಣ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಹೆದ್ದಾರಿಯಲ್ಲಿ ಸಮಸ್ಯೆಗಳು, ಲೋಪಗಳು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಅಂದು ಮೈಸೂರು ರಾಜವಂಶಸ್ಥರು ಬೆಂಗಳೂರು-ಮೈಸೂರು ನಡುವೆ ರಸ್ತೆ ನಿರ್ಮಿಸಿದ್ದರು. ಅದನ್ನು ಎರಡು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಿದರು. ಆದರೀಗ ಬಿಜೆಪಿ ಸರ್ಕಾರ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಎಕ್ಸ್‌ಪ್ರೆಸ್ ಹೈವೇ ನಿರ್ಮಿಸಿದೆ. ಇದಕ್ಕಾಗಿ ಮಂಡ್ಯ ಜಿಲ್ಲೆ ವ್ಯಾಪ್ತಿಯ 60 ಕಿ.ಮೀ. ಉದ್ದ ರಸ್ತೆಯ ಅಕ್ಕಪಕ್ಕದಲ್ಲಿ 690 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಇನ್ನು ಜಮೀನು ಕೊಟ್ಟ ರೈತರಿಗೆ ಹೆದ್ದಾರಿಯಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಭೂಮಿ ಕೊಟ್ಟ ರೈತರು ಟೋಲ್ ಪಾವತಿಸಿ ಸಂಚರಿಸಬೇಕು. ಮದ್ದೂರು ನಿಡಘಟ್ಟದಿಂದ ಮೈಸೂರಿಗೆ ಹೋಗುವವರಿಗೆ 155 ರೂ. ಟೋಲ್ ನಿಗದಿಪಡಿಸಲಾಗಿದೆ.
ಮಂಡ್ಯದಿಂದ, ಮಂಡ್ಯ ತಾಲೂಕು ತೂಬಿನಕೆರೆಯಿಂದ ಮೈಸೂರಿಗೆ ಹೋಗುವವರು ಇಷ್ಟೇ ಮೊತ್ತ ಪಾವತಿಸಬೇಕು. ಇದು ಅವೈಜ್ಞಾನಿಕ. ಇಷ್ಟಾಗಿಯೂ ಟೋಲ್ ಕಟ್ಟಿದವರಿಗೆ ಹೆದ್ದಾರಿಯಲ್ಲಿ ಸೂಕ್ತ ಸವಲತ್ತುಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಬಾಬು, ನರಸಪ್ಪ ಹೆಗ್ಗಡೆ, ಸಂಪತ್, ಲಿಂಗರಾಜು, ಗೋವಿಂದ ಇದ್ದರು.