ಬೆಂಗಳೂರು: 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿಶೇಷ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಧ್ವಜಾರೋಹಣದ ನಂತರ ಮುಖ್ಯಮಂತ್ರಿಗಳು ತೆರೆದ ಜೀಪ್ನಲ್ಲಿ ಪರೇಡ್ ವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿದರು. ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ನಾವು ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಈ ನಮ್ಮ 5 ಗ್ಯಾರಂಟಿಯಿಂದ ಮಾಸಿಕ 4 ರಿಂದ 5 ಸಾವಿರ ಪ್ರತಿ ಫಲಾನುಭವಿ ಕುಟುಂಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಭಿಸುತ್ತಿದೆ. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ನಾವು ಉತ್ತರಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಹಲವು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಗಳು ನಡೆಯುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟಿಷರ ನಡುವಿನ ಯುದ್ಧ ಸನ್ನಿವೇಶ ಮತ್ತು ರಾಣಿ ಅಬ್ಬಕ್ಕನ ಹೋರಾಟದ ಮೆಲುಕಿನ ಜತೆಗೆ ಮಲ್ಲಗಂಬ ಕಸರತ್ತು ಪ್ರದರ್ಶನ ಸೇರಿದಂತೆ ಹಲವು ರೀತಿಯ ಭಾರತೀಯ ಸಂಸ್ಕೃತಿಯನ್ನು ಅನಾವರಣ ಮಾಡುವ ಕಾರ್ಯಕ್ರಮಗಳು ನಡೆಯುತ್ತಿವೆ.
ಕವಾಯತು ನಡೆಯುವ ಮೈದಾನದ ಸುತ್ತಮುತ್ತ ಪೊಲೀಸರು ವಿಶೇಷ ಭದ್ರತೆ ವಹಿಸಿದ್ದಾರೆ. ಬೆಳಗ್ಗೆಯಿಂದಲೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಮೈದಾನದ ಇಂಚಿಂಚೂ ಸಹ ತಪಾಸಣೆ ನಡೆಸಿತು.
ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದಂತೆ 10 ಡಿಸಿಪಿ, 17 ಎಸಿಪಿ, 42 ಇನ್ಸ್‌ಪೆಕ್ಟರ್, 112 ಸಬ್ ಇನ್ಸ್‌ಪೆಕ್ಟರ್, 62 ಸಹಾಯಕ ಸಬ್ ಇನ್ಸ್‌ಪೆಕ್ಟರ್, 511 ಕಾನ್ಸ್‌ಟೇಬಲ್, 72 ಮಹಿಳಾ ಸಿಬ್ಬಂದಿ, 129 ಸಾದಾ ಉಡುಪಿನ ಅಧಿಕಾರಿಗಳು ಮತ್ತು ಸಿಬ್ಬಂದಿ, 27 ಜನ ಕ್ಯಾಮರಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಸಂಚಾರ ವ್ಯವಸ್ಥೆ ನಿರ್ವಹಣೆಗಾಗಿ 3 ಜನ ಡಿಸಿಪಿ, 6 ಎಸಿಪಿ, 19 ಇನ್ಸ್‌ಪೆಕ್ಟರ್, 32 ಸಬ್ ಇನ್ಸ್‌ಪೆಕ್ಟರ್, 111 ಸಹಾಯಕ ಸಬ್ ಇನ್ಸ್‌ಪೆಕ್ಟರ್, 430 ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 1583 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.