ಬನ್ನೂರು: ಪುರಾಣ ಪ್ರಸಿದ್ಧ ಶ್ರೀ ಹೇಮಾದ್ರಾಂಬಾ ಜಾತ್ರಾ ಮಹೋತ್ಸದ ಪಟ್ಟಣದಲ್ಲಿ ಕಳೆಗಟ್ಟಿದ್ದು, ಹೇಮಾದ್ರಾಂಬಾ ದೇವಿಯ ಅಲಂಕರಿಸಿದ ತೇರನ್ನು ರಾಜಬೀದಿಗಳಲ್ಲಿ ಎಳೆಯುವ ಮೂಲಕ ಭಕ್ತರು ಸಂಭ್ರಮಿಸಿದರು.
ಅಲಂಕೃತಗೊಂಡ ತೇರನ್ನು ಭಾನುವಾರ ಬೆಳಗ್ಗೆ 8.30ರಲ್ಲಿ ಎಳೆಯುವ ಮೂಲಕ ಗ್ರಾಮದ ಮುಖಂಡರು ಚಾಲನೆ ನೀಡಿದರು. ನಂತರ ತೇರಿನಬೀದಿ ಮೂಲಕ ಸಾಗಿದ ರಥವು ದೊಡ್ಡಂಗಡಿ ಬೀದಿ ಮೂಲಕ ಸಾಗಿ ಮತ್ತೆ ದೇವಾಲಯದ ಆವರಣವನ್ನು ಬೆಳಗ್ಗೆ 11.30ಕ್ಕೆ ತಲುಪಿತು. ಈ ಮೂಲಕ ರಥೋತ್ಸವ ಪೂರ್ಣಗೊಂಡಿತು.
ಇನ್ನು ಶನಿವಾರ ಜಾತ್ರೆ ಅಂಗವಾಗಿ ಜೋಡೆತ್ತಿನ ಬಂಡಿಗಳನ್ನು ಪಟ್ಟಣದ ರಾಜ ಬೀದಿಗಳಲ್ಲಿ ಓಡಿಸಲಾಯಿತು. ಇದಕ್ಕೂ ಮುನ್ನಾ ಬೆಳಗ್ಗೆ ಪ್ರಾತಃಕಾಲದಲ್ಲಿ ವಿವಿಧ ಹೂಗಳಿಂದ ಅಲಂಕರಿಸಿದ ಹೇಮಾದ್ರಾಂಬಾ ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿ ದರ್ಶನ ಪಡೆದರು.
ವಿಶೇಷ ಪೂಜಾ ಕಾರ್ಯಕ್ರಮ ಅಂಗವಾಗಿ ಮಾಕನಹಳ್ಳಿಯ ದೇವಿ ತೋಪಿಗೆ ಹೇಮಾದ್ರಾಂಬಾ ಉತ್ಸವ ಮೂರ್ತಿಯನ್ನು ಫಲ್ಲಕ್ಕಿಮೇಲೆ ಕೂರಿಸಿ ಕರೆದೊಯ್ಯಲಾಯಿತು. ದೇವಿ ತೋಪಿನಲ್ಲಿ ದೇವಿಗೆ ಅವಭೃತಸ್ನಾನ ಮತ್ತು ಅನ್ನನೈವೇದ್ಯ ನೆರವೇರಿಸಲಾಯಿತು.
ಅವಭೃತಸ್ನಾನ ಮತ್ತು ಅನ್ನನೈವೇದ್ಯಕ್ಕಾಗಿ ಬನ್ನೂರಿನಿಂದ ಮಾಕನಹಳ್ಳಿಯ ದೇವಿ ತೋಪಿಗೆ ದೇವಿಯನ್ನು ಫಲ್ಲಕ್ಕಿ ಮೇಲೆ ಕೂರಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಣದ ರಾಜ ಬೀಗಳಲ್ಲಿ, ಅಂದರೆ ದೇವಾಲಯದಿಂದ ರತ್ನಮಹಲ್ ಚಿತ್ರಮಂದಿ, ಚಾಮುಂಡಿ ದೇವಾಲಯ ರಸ್ತೆ ಮಾರ್ಗವಾಗಿ ದೇವಿ ತೋಪಿನವರೆಗೆ ಕರೆತರಲಾಯಿತು.
ಈ ವೇಳೆ ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ದೇವಿ ದರ್ಶನ ಪಡೆದರು. ದೇವಿ ತೋಪಿನಲ್ಲಿ ಅವಭೃತ ಸ್ನಾತ ನೆರೆವೇರಿದ ಬಳಿಕ ಹರಿಜನರಿಂಧ ನೈವೇದ್ಯ ನೀಡಲಾಯಿತು. ಈ ವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಭಕ್ತರೆಲ್ಲರಿಗೂ ಅನ್ನ ಪ್ರಸಾದವಿತ್ತು.