ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ, ಜೆಡಿಎಸ್‌ಗೆ ಸ್ವಾಗತಿಸುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ವಿರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ಅವರು ಜೆಡಿಎಸ್‌ಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಆಶಯ ನುಡಿಗಳನ್ನಾಡಿದರು.
ಮೂರು ಮೇಯರ್ ಸ್ಥಾನ ಜೆಡಿಎಸ್‌ಗೆ ಎರಡು ಕಾಂಗ್ರೆಸ್‌ಗೆ ಎಂದು ಮಾತುಕತೆಯಾಗಿತ್ತು. ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದಿದ್ದರಿಂದ ಕೆಲವು ಸನ್ನಿವೇಶಗಳು ಪ್ರಾರಂಭವಾದವು. ಈ ಹಿಂದೆ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಹೋಟೆಲ್‌ನಲ್ಲಿದ್ದು ರಾಜಕಾರಣ ಮಾಡುತ್ತಾರೆ ಎನ್ನುತ್ತಿದ್ದರು. ನಾವು ಹೋಟೆಲ್‌ನಲ್ಲಿ ಕುಳಿತು ರಾಜಕಾರಣ ಮಾಡಲು ಕಾರಣ ಯಾರು ಎಂದು ಇಂದು ಸಾರಾ ಮಹೇಶ್ ಪ್ರಶ್ನಿಸಿದರು.
ನಾವು ವಾಸ್ತವವಾಗಿ ಯಾರೊಂದಿಗೂ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಸಿರಲಿಲ್ಲ. ಕಾಂಗ್ರೆಸ್‌ನ ಅಧ್ಯಕ್ಷರು ಹಾಗೂ ಶಾಸಕ ತನ್ವಿರ್ ಸೇಠ್ ನನ್ನ ಕಚೇರಿಗೆ ಬರುತ್ತೇನೆ ಅಂದ್ರು, ಅದಕ್ಕೆ ನಾನು ಬನ್ನಿ ಅಂದೆ. 3 ಮೇಯರ್ ಸ್ಥಾನ ನಿಮಗೆ, ನಮಗೆ 2 ಸ್ಥಾನ ಎಂದು ಅವರೇ ಹೇಳಿದ್ದರು. ಸಿದ್ದರಾಮಯ್ಯ ಹೇಳಿಕೆ ಬಿಟ್ಟರೆ ಕಾಂಗ್ರೆಸ್ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ ಎಂದರು.
ಇನ್ನು ಕಾಂಗ್ರೆಸ್ ಮುಖಂಡರು ಬಂದು ಹೋದ ಬಳಿಕ ಬಿಜೆಪಿ ಬಳಗ ನನ್ನ ಕಚೇರಿಗೆ ಬಂದರು, ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದೆ. ಡಿಕೆಶಿ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿದ್ದರು. ಇದನ್ನು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು.
ನಾನು ರಾಜ್ಯಾಧ್ಯಕ್ಷರಾಗಿರುವಾಗ ಮೈಸೂರು ಮೇಯರ್ ಸ್ಥಾನ ಪಡೆಯಲಿಲ್ಲ ಎಂಬಂತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಜೊತೆ ಬನ್ನಿ ಎಂದು ಡಿಕೆಶಿ ಹೇಳಿದ್ದರು. ಬಳಿಕ ತನ್ವಿರ್ ಸೇಠ್ ಭೇಟಿ ಮಾಡಿದೆವು. ನಂತರ ಧ್ರುವನಾರಾಯಣ್ ಸಹ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಮೇಯರ್ ಆಯ್ಕೆ ಸಂಬಂಧ ನಡೆದಿದ್ದ ಬೆಳವಣಿ ವಿವರಿಸಿದರು.
ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡದ ಹಿನ್ನೆಲೆ ಶ್ರೀಧರ್ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಸಮೀವುಲ್ಲಾ, ಕೆ.ವಿ.ಶ್ರೀಧರ್ ಹಾಗೂ ಮ.ವಿ.ರಾಮಪ್ರಸಾದ್‌ಗೆ ವರ್ಕ್ ಕಮಿಟಿ ಕೊಡುವುದಾಗಿ ತೀರ್ಮಾನವಾಗಿ ಬೆಂಬಲ ಪಡೆದಿದ್ದೆವು. ಪಕ್ಷೇತರರ ಬೆಂಬಲ ಪಡೆದು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತವಿತ್ತು ಎಂದು ತಿಳಿಸಿದರು.
ಇನ್ನು ಈಗ ನೋಡಿದರೆ ನಾವು ಏನೋ ಅಪರಾಧ ಮಾಡಿರುವವರ ರೀತಿ ಕಾಂಗ್ರೆಸ್‌ನ ಕೆಲ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಮಗೆ ಬೇಸರವಿದೆ ಎಂದು ನೇರವಾಗಿಯೇ ಕೆಲ ಕಾಂಗ್ರೆಸ್ ನಾಯಕರ ನಡೆಗೆ ಸಾ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದರು.