ವಿಜಯಪಥ ಸಮಗ್ರ ಸುದ್ದಿ
ವಿಜಯಪುರ: ಬಸ್ ಟಿಕೆಟ್ ದರ ಹೆಚ್ಚಳ ಇಲ್ಲವೇ ಇಲ್ಲ. ಹೆಚ್ಚಳ ಮಾಡುವ ಪ್ರಸ್ತಾವನೆಯೂ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೊನಾ ಸೋಂಕಿನಿಂದ ಈಗಾಗಲೇ ಜನರು ತೊಂದರೆಗೀಡಾಗಿದ್ದಾರೆ. ಇನ್ನು ಕಳೆದ ವರ್ಷವೇ ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಈ ಮೂರು ನಿಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಈ ಬಗ್ಗೆ ಸದಕ್ಕೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಮೊನ್ನೆ ಡೀಸೆಲ್ ದರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ನಿಗಮದ ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಈ ಬಗ್ಗೆ ಚರ್ಚೆ ಮಾಡಿ ಬಳಿಕ ದರ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದರು.
ಗಾಣಿಗ ಸಮಾಜದ ಮೀಸಲಾತಿ ಹೋರಾಟದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದರ ಬಗ್ಗೆ ಯೋಚನೆಯೂ ಇಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಇದೆ. ಆದ್ದರಿಂದ ಮಲ್ಲಿನಾಥ ಸ್ವಾಮೀಜಿ ಇಂತಹ ಹೇಳಿಕೆಗಳನ್ನು ಕೊಡಬಾರದು, ಇದು ಸರಿಯಲ್ಲ ಎಂದು ಹೇಳಿದರು.
ಸಿಂದಗಿ ಮತಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಪ್ರಶ್ನೆಯಿಲ್ಲ. ಸ್ಥಳೀಯರಲ್ಲಿ ಸೂಕ್ತರನ್ನು ಆರಿಸಿ ಗೆಲ್ಲಿಸಿ ತರುತ್ತೇನೆ. ಸುಖಾಸುಮ್ಮನೆ ಮಾಧ್ಯಮದವರು ನನ್ನ ಹೆಸರನ್ನು ಪ್ರಸ್ತಾಪಿಸಿ ಕಾಗೆ ಹಾರಿಸುತ್ತಿದ್ದಾರೆ ಎಂದು ಮುಂಬರುವ ಸಿಂದಗಿ ಉಪಚುನಾವಣೆಯಲ್ಲಿ ನಿಲ್ಲುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಇನ್ನು 18 ಗಂಟೆಯಲ್ಲಿ 24 ಕಿಮೀ ವಿಜಯಪುರ – ಸೊಲ್ಹಾಪುರ ರಸ್ತೆಯನ್ನು ನಿರ್ಮಾಣ ಮಾಡಿದ ಕಾರ್ಮಿಕರ ಸಾಧನೆಗೆ ಶುಭಾಶಯಗಳು. ಅಭೂತಪೂರ್ವ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ರೋಡಕರಿ ಅಂತ ಜನರು ಕರೆಯುತ್ತಿದ್ದಾರೆ ಎಂದು ಹೇಳಿದರು.