ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿರುವ ಬಗ್ಗೆ ಕಾಂಗ್ರೆಸ್‌ನಲ್ಲಿ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಸಮಜಾಯಿಷಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರಮೇಶ್ ಕುಮಾರ್ ಅವರು ಮೈತ್ರಿ ಯಾರನ್ನು ಕೇಳಿ ಮಾಡಿದ್ದೀರಿ ಎಂಬ ಮೂಲ ಪ್ರಶ್ನೆಯನ್ನು ಎತ್ತಿದ್ದರು. ಅದಕ್ಕೆ ನಿನ್ನೆ ನಡೆದ ಸನಗರ ಸಭೆ ಸದಸ್ಯರ ಸುದ್ದಿ ಗೋಷ್ಠಿಯಲ್ಲಿ ಉತ್ತರ ನೀಡಿದ್ದೆ.
ಮೈತ್ರಿಗೆ ಮುಂದಾಗಿ ಎಂದು ಸಿದ್ದರಾಮಯ್ಯ ಅವರು ನನಗೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಸಿಗುವಂತೆ ನೋಡಿಕೊಳ್ಳಿ ಎಂದೂ ಹೇಳಿದ್ದರು. ಆದರೆ, ಮಗು ಬೇಕೆಂದು ನಿರ್ಧಾರ ಮಾಡಿದ ಮೇಲೆ ಯಾವುದಾದರೆ ಏನು. ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಇನ್ನು ಮೈತ್ರಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದವರು ನೀವು ಈಗ ನಮ್ಮ ಮೇಲೆ ಏಕೆ ಗೂಬೆ ಕೂರಿಸುತ್ತಿದ್ದೀರ. ಇದು ಅತಿ ಹೆಚ್ಚಾಗಿ ಸಾರ್ವಜನಿಕರ ವಲಯದಲ್ಲಿ ಚರ್ಚೆ ಮಾಡುವುದಲ್ಲ. ಪಕ್ಷ ಈ ಬಗ್ಗೆ ನನಗೆ ವರದಿ ಕೊಡುವಂತೆ ಕೇಳಿದೆ ನಾನು ವರದಿ ಕೊಡುತ್ತೇನೆ ಪಕ್ಷ ನನ್ನ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಪಕ್ಷದ ಸಿದ್ಧಾಂತಕ್ಕೆ ಚ್ಯುತಿ ಬಾರುವ ರೀತಿ ನಾನು ನಡೆದುಕೊಂಡಿಲ್ಲ. ಹೀಗಾಗಿ ನಾನು ಪಕ್ಷಕ್ಕೆ ಮತ್ತು ನಾಯಕರು ಹೇಳಿದಂತೆ ನಾನು ಮಾಡಿದ್ದೇನೆ ಅಷ್ಟೇ ಇದನ್ನು ಬಿಟ್ಟು ನಾನೇನು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.