ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೂ ಏಳನೇ ವೇತನ ಆಯೋಗದ ಮಾದರಿ ಅಳವಡಿಸಲು ಒತ್ತಾಯಿಸುವಂತೆ ಕ.ರಾ.ಸ.ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಗಂದಗೆ ಅವರಿಗೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಗರದ ರಾಜೇಂದ್ರ ಗಂದಗೆ ಅವರ ಕಚೇರಿಯಲ್ಲಿ ಅವರನ್ನು ಭಾನುವಾರ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಸರಕಾರ ಈಗಾಗಲೇ ಸರಕಾರಿ ಮತ್ತು ನಿಗಮ, ಮಂಡಳಿಗಳ ನೌಕರರಿಗೆ ಏಳನೇ ವೇತನ ಮಾದರಿಯಲ್ಲಿ ಸುಮಾರು 9.5 ಲಕ್ಷ ನೌಕರರಿಗೆ ಕೇಂದ್ರ ಸರಕಾರಿ ನೌಕರರ ಸರಿಸಮಾನ ವೇತನ ನೀಡಲು ಆಯೋಗ ರಚನೆ ಮಾಡಲು ಸಿದ್ಧತೆ ನಡೆಸಿರುವುದು ಸಂತಸದ ವಿಷಯ.
ಸಾರಿಗೆ ನಿಗಮದಲ್ಲಿ ಅವೈಜ್ಞಾನಿಕ 4 ವರ್ಷಕ್ಕೆ ಒಮ್ಮೆ ನಡೆಯುವ ವೇತನ ಪರಿಷ್ಕರಣೆಯ ಪದ್ಧತಿಯಿಂದ ಸಾರಿಗೆ ನೌಕರರಿಗೆ ಹಾಗೂ ಸರಕಾರಿ ನೌಕರರಿಗೆ ಹೋಲಿಸಿದರೆ ಸುಮಾರು ಶೇಕಡಾ 13% ರಿಂದ 45% ವೇತನ ಕಡಿಮೆ ಇದ್ದು ಇದನ್ನು ಮನಗಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕಳೆದ ನಾಲ್ಕು ವರ್ಷಗಳಿಂದ ಆನೇಕ ಶಾಂತಿಯುತ ಹೋರಾಟಗಳ ಮೂಲಕ ಸಾರಿಗೆ ನೌಕರರಿಗೂ ಸರಕಾರಿ ನೌಕರರಿಗಿರುವಂತೆ ವೇತನ ಆಯೋಗದ ಮಾದರಿಯಲ್ಲಿ ಸರಿಸಮಾನ ನೀಡುವಂತೆ ಹೋರಾಟ ಮಾಡುತ್ತಿದೆ.
ಕಳೆದ ಡಿಸೆಂಬರ್ 2020 ರಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ಸರಕಾರ ಸಾರಿಗೆ ನೌಕರರಿಗೆ ಆರನೇಯ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಆದರೆ ಸರಕಾರ ಇದುವರೆಗೂ ಆ ಬೇಡಿಕೆಗಳನ್ನು ಈಡೇರಿಸಿಲ್ಲ.
ಆದ್ದರಿಂದ ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೆವೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸರಕಾರದ ಆಧೀನದ ನಿಗಮ ಮಂಡಳಿಯಾಗಿದ್ದು, ಸಂಸ್ಥೆಯಲ್ಲಿ ಸುಮಾರು 1.25 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸುಮಾರು 1 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ.
ಆದರೂ ಸಾರಿಗೆ ಸಂಸ್ಥೆಯ ನೌಕರರನ್ನು ವೇತನ ಆಯೋಗದಿಂದ ಹೊರಗಿಟ್ಟಿರುವುದು ಅನ್ಯಾಯದ ಪರಮಾವಧಿ. ದಯವಿಟ್ಟು ಸರಕಾರದ ಇತರ ನಿಗಮ ಮಂಡಳಿಗಳ ನೌಕರರು ಪಡೆಯುತ್ತಿರುವಂತೆ ವೇತನ ಆಯೋಗದ ಮಾದರಿಯಲ್ಲಿ ನಮಗೂ ವೇತನ ನಿಗದಿ ಮಾಡಬೇಕು.
ಹೀಗಾಗಿ ಈ ಬಾರಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ವೇತನ ಆಯೋಗದ ಅಡಿಯಲ್ಲಿ ತರಬೇಬೇಕು. ಆ ಮೂಲಕ ಸಾರಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದರು.