NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಅತೀ ಕಡಿಮೆ ಸಂಬಳ ಕೊಡುತ್ತಿರುವುದೂ ಕೂಡ ಒಂದು ಗಿನ್ನಿಸ್ ದಾಖಲೆಯೇ ಸರಿ, ಇದನ್ನೂ ಕೂಡಾ ವಿಶ್ವ ದಾಖಲೆಗೆ ಸೇರಿಸಿ: ಸಿಎಂ ವಿರುದ್ಧ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ 38 ವೇತನ ಹಿಂಬಾಕಿ ಕೊಡದೇ, 21 ತಿಂಗಳು ಮುಗಿದರೂ ಒಂದು ರೂಪಾಯಿ ವೇತನ ಹೆಚ್ಚು ಮಾಡದೇ ಅತೀ ಹೆಚ್ಚು ಕೆಲಸ ಮಾಡಿಸಿಕೊಂಡು ಅತೀ ಕಡಿಮೆ ಸಂಬಳ ಕೊಡುತ್ತಿರುವುದೂ ಕೂಡ ಒಂದು ಗಿನ್ನಿಸ್ ದಾಖಲೆಯೇ ಸರಿ ಇದನ್ನೂ ಕೂಡಾ ವಿಶ್ವ ದಾಖಲೆಗೆ ಸೇರಿಸಿ ಎಂದು ನೌಕರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಜಾರಿಯಾಗಿರುವ ಶಕ್ತಿ ಯೋಜನೆಯಡಿ 564 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ಸೇರ್ಪಡೆಯಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಸಿಎಂ ಶ್ಲಾಘನೆಗೆ ಪ್ರತ್ಯುತ್ತರ ನೀಡಿರುವ ನೌಕರರು ವಿಶ್ವ ದಾಖಲೆ ಮಾಡಿದವರ ವೇತನ ತುಂಬಾ ಕಡಿಮೆ ಇದೆ ವಿಶ್ವ ದಾಖಲೆಯ ವೇತನವನ್ನು ನೀಡಿದರೆ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಇದನ್ನೂ ಕೂಡ ವಿಶ್ವ ದಾಖಲೆಗೆ ಸೇರಿಸಿ ನೌಕರರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದಿಲ್ಲ ಎಂದು ಹೇಳುವಂತೆಯೂ  ಆಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ನೌಕರರು.

ಇನ್ನು ಕಳೆದ ಇಪ್ಪತ್ತೆಂಟು ವರ್ಷಗಳಲ್ಲಿ ಅತಿ ಹೆಚ್ಚು 464 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಕೆಎಸ್‌ಆರ್‌ಟಿಸಿ ಎರಡು ವಿಶ್ವ ದಾಖಲೆಗಳಿಗೆ ಸೇರ್ಪಡೆಯಾಗಿದೆ.

1997ರಿಂದ 2025ರ ಅಕ್ಟೋಬರ್ ವರೆಗೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಒಟ್ಟು 667 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ 464 ಪ್ರಶಸ್ತಿಗಳನ್ನು ಪಡೆದ ಕೆಎಸ್‌ಆರ್‌ಟಿಸಿಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ಸೇರ್ಪಡೆಯಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

ರಾಮಲಿಂಗಾರೆಡ್ಡಿ ಅವರು 2013-2017ರಲ್ಲಿ ಸಾರಿಗೆ ಸಚಿವರಾಗಿದ್ದ ವೇಳೆ ಕೆಎಸ್‌ಆರ್ಟಿಸಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 204 ಪ್ರಶಸ್ತಿಗಳು ದೊರೆತಿವೆ. ಅದೇ ರೀತಿ 2023ರಿಂದ ಈವರೆಗೆ ಅವರ ಅಧಿಕಾರವಧಿಯಲ್ಲಿ ಕೆಎಸ್‌ಆರ್‌ಟಿಸಿ 218 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಹೀಗೆ, ಒಂದೇ ಸಂಸ್ಥೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದೆ.

ಈ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿತ್ತು. ಈಗ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆ ಯಾಗುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿ ಸಾರಿಗೆ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

ಆದರೆ, ನೌಕರರ ಶ್ರಮಕ್ಕೆ ತಕ್ಕ ವೇತನ ಇತರೆ ಸೌಲಭ್ಯಗಳನ್ನು ಮಾತ್ರ ನೀಡುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರೆ ತಾವು ಉಳಿಸಿಕೊಂಡಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜ.1ರಿಂದ ಹೆಚ್ಚಳವಾಗಬೇಕಿರುವ ವೇತನದ ಬಗ್ಗೆ ಉದಾಸೀನತೆ ತೋರುತ್ತಿರುವ ನೀವು ಇದನ್ನು ವಿಶ್ವದಾಖಲೆಗೆ ಸೇರಿಸಿ ಎಂದು ಭಾರಿ ನೋವಿನಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ನೌಕರರು.

Megha
the authorMegha

Leave a Reply

error: Content is protected !!