ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ 16 ವರ್ಷದ ಸಂತ್ರಸ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಯಾಕೆ ರಾಹುಲ್ ಗಾಂಧಿಗೆ ನೋಟಿಸ್ ನೀಡಿಲ್ಲ ಎಂದು ವಿಶೇಷ ತನಿಖಾ ತಂಡವನ್ನು (SIT) ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಹುಲ್ ಗಾಂಧಿ ಮಹಾನುಭವ ಈ ಪ್ರಕರಣದಲ್ಲಿ 16 ವರ್ಷದ ಅಪ್ರಾಪ್ತರು ಇದ್ದಾರೆ ಎಂದು ಹೇಳಿದ್ದಾರೆ. ಇದು ಗಂಭೀರ ಆರೋಪ. ಪೋಕ್ಸೋ ಪ್ರಕರಣ (Pocso Case) ಸಾಬೀತಾದರೆ ಜೀವನಪರ್ಯಂತ ಜೈಲು ಶಿಕ್ಷೆಯಾಗುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ಅಪ್ರಾಪ್ತರು ಹೇಳಿಕೆ ನೀಡಿಲ್ಲ ಯಾಕೆ? ಯಾವ ಆಧಾರದಲ್ಲಿ ರಾಹುಲ್ ಗಾಂಧಿ ಹೇಳಿಕೆ ಕೊಟ್ಟ ಎಂದು ಪ್ರಶ್ನಿಸಿ ಏಕವಚನದಲ್ಲೇ ಕುಮಾರಸ್ವಾಮಿ ಕಿಡಿಕಾರಿದರು.
ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದಾಗ ಪ್ರಕರಣದ ವಿಚಾರಣೆಗೆ ಸಾಕ್ಷಿಯನ್ನಾಗಿ ಪರಿಗಣಿಸಿ ಅವರನ್ನು ಕರೆಯಬೇಕಿತ್ತು. ಎಸ್‌ಐಟಿ ಯಾಕೆ ಇನ್ನೂ ನೋಟಿಸ್ ನೀಡಿಲ್ಲ? ಈಗ ಪೋಕ್ಸೋ ಪ್ರಕರಣ ದಾಖಲು ಮಾಡಲು 16 ವರ್ಷದ ಅಪ್ರಾಪ್ತರನ್ನು ಹುಡುಕಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಹಿಡಿಯುವುದಿಲ್ಲ ಅಂತ ಗೊತ್ತಾಗಿದೆ. ಈಗ ಈ ವಿಷಯದಲ್ಲಿ ಅಮಿತ್ ಶಾ, ಮೋದಿ ಅವರನ್ನು ಎಳೆದು ತಂದು ದೇಶವ್ಯಾಪಿ ಪ್ರಚಾರಕ್ಕೆ ಕಾಂಗ್ರೆಸ್ ಬಳಸುತ್ತಿದೆ. ಭಾರತ ಮಾತ್ರವಲ್ಲ ಸಿಂಗಾಪುರ್ ಸೇರಿದಂತೆ ವಿದೇಶದ ವಾಹಿನಿಗಳಲ್ಲೂ ಸುದ್ದಿ ಬಂದಿದೆ.
ಪೆನ್ ಡ್ರೈವ್‌ನಲ್ಲಿ ಫೋಟೋ ಹಾಕಿ ಸೃಷ್ಟಿ ಮಾಡಿ ಬೀದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್, ರೆಡ್ ಕಾರ್ನರ್ ನೋಟಿಸ್ ಏನೋ ಮಾತನಾಡುತ್ತೀರಿ ಅಲ್ವಾ? ಅದೇ ರೀತಿ ರಾಜ್ಯಾದ್ಯಂತ ಪೆನ್ ಡ್ರೈವ್ ರಿಲೀಸ್ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದ ವ್ಯಕ್ತಿಗಳ ಬಂಧನಕ್ಕೆ ಯಾವ ಬಣ್ಣದಲ್ಲಿ ನೋಟಿಸ್ ನೀಡಿದ್ದೀರಿ. ಯಾಕೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದರ ಜತೆಗೆ ಕುಮಾರಸ್ವಾಮಿ 15 ಪ್ರಶ್ನೆಗಳನ್ನು ಗೃಹ ಸಚಿವರಿಗೆ ಕೇಳಿದ್ದಾರೆ: ಪ್ರಶ್ನೆ 01: ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ? ಪ್ರಶ್ನೆ 02: ಆಕೆ ಕೈನಿಂದ ಪ್ರಜ್ವಲ್ ವಿರುದ್ಧ ದೂರು ಕೊಡಿಸಿದ್ಯಾರು? ಪ್ರಶ್ನೆ 03: ಕಿಡ್ನ್ಯಾಪ್ ಆಗಿದ್ದ ಸಂತ್ರಸ್ತೆಯನ್ನ ಎಲ್ಲಿಂದ ಕರ್ಕೊಂಡ್ ಬಂದ್ರಿ?
ಪ್ರಶ್ನೆ 04: ಕಿಡ್ನ್ಯಾಪ್ ಸಂತ್ರಸ್ತೆ ಸಿಕ್ಕ ತೋಟದ ಮನೆಯಲ್ಲಿ ಮಹಜರಾಗಿದ್ಯಾ? ಪ್ರಶ್ನೆ 05: ಸಂತ್ರಸ್ತೆಯನ್ನ ಜಡ್ಜ್ ಮುಂದೆ ಹಾಜರುಪಡಿಸಿಲ್ಲ ಯಾಕೆ? ಪ್ರಶ್ನೆ 06: ನಿಮಗೆ ಬೇಕಾದ ರೀತಿ ರೇವಣ್ಣ ಹೇಳಿಕೆ ನೀಡಬೇಕಾ? ಪ್ರಶ್ನೆ 07: ಕಾರ್ತಿಕ್ ಗೌಡ ವೀಡಿಯೋ ಮಾಡಿ ಹಂಚಿದ್ದು ಯಾರು? ಪ್ರಶ್ನೆ 08: ಕಾರ್ತಿಕ್ ಗೌಡನನ್ನ ಈವರೆಗೂ ಯಾಕೆ ಹುಡುಕಿಲ್ಲ?
ಪ್ರಶ್ನೆ 09: SIT ತನಿಖೆ ಕೇವಲ ಪ್ರಜ್ವಲ್, ರೇವಣ್ಣ ವಿರುದ್ಧವಷ್ಟೇನಾ? ಪ್ರಶ್ನೆ 10: ಕಾರ್ತಿಕ್ ಗೌಡ ಎಲ್ಲಿದ್ದಾನೆ? ಯಾಕೆ ಆತನಿಗೆ ರಕ್ಷಣೆ? ಪ್ರಶ್ನೆ 11: ಕಾರ್ತಿಕ್ ಗೌಡನನ್ನ ರಕ್ಷಣೆ ಮಾಡ್ತಿರೋದು ಯಾಕೆ? ಪ್ರಶ್ನೆ 12: ಯಾಕೆ ಕಾರ್ತಿಕ್ ಗೌಡನನ್ನ ಇದುವರೆಗೂ ಬಂಧಿಸಿಲ್ಲ?
ಪ್ರಶ್ನೆ 13: 25 ಸಾವಿರ ಪೆನ್‌ಡ್ರೈವ್ ಬಿಟ್ಟವರ ಮೇಲೆ ಕ್ರಮವೇನು? ಪ್ರಶ್ನೆ 14: 5 ಜನರ ಮೇಲೆ ಕಂಪ್ಲೇಂಟ್ ಕೊಟ್ಟಿದ್ರೂ ಕ್ರಮ ಏಕಿಲ್ಲ? ಪ್ರಶ್ನೆ 15: ವಿಡಿಯೋ ರಿಲೀಸ್ ಮಾಡಿದವರ ಮೇಲೆ ತನಿಖೆ ಯಾಕಿಲ್ಲ?