ರಾಜ್ಯಗಳು ಒಪ್ಪಿದರೆ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ : ನಿರ್ಮಲಾ ಸೀತಾರಾಮನ್
ನ್ಯೂಡೆಲ್ಲಿ: ರಾಜ್ಯಗಳು ಒಪ್ಪಿದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಬಳಿಕ ಉದ್ಯಮಿಗಳ ವಾಣಿಜ್ಯ ಮಂಡಳಿ ಪಿಎಚ್‌ಡಿಸಿಸಿಐ ಸದಸ್ಯರೊಂದಿಗೆ ಆಯೋಜಿಸಿದ್ದ ಸಂವಾದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಅವರು, ಅಭಿವೃದ್ಧಿಯನ್ನು ಉತ್ತೇಜಿಸಲು ಕಳೆದ ವರ್ಷಗಳಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಒತ್ತು ನೀಡಿದೆ ಎಂದು ವಿವರಿಸಿದರು.
ಇನ್ನು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಈಗಾಗಲೇ ಅವಕಾಶವಿದೆ. ನಮ್ಮ ಹಿಂದಿನ ಸರ್ಕಾರಗಳು ಅದಕ್ಕಾಗಿ ಬಾಗಿಲನ್ನು ಮುಕ್ತವಾಗಿರಿಸಿವೆ. ಆದರೆ ಎಲ್ಲ ರಾಜ್ಯಗಳು ಈ ಬಗ್ಗೆ ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದರು.
ಕಚ್ಚಾ ಪೆಟ್ರೋಲ್, ಮೋಟಾರ್ ಸ್ಪಿರಿಟ್ (ಪೆಟ್ರೋಲ್), ಹೈಸ್ಪೀಡ್ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಹಾಗೂ ವಿಮಾನ ಇಂಧನಗಳನ್ನು ತಾತ್ಕಾಲಿಕವಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅವನ್ನು ಎಂದಿನಿಂದ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬಹುದು ಎಂಬ ಸಂಗತಿಯನ್ನು ಜಿಎಸ್‌ಟಿ ಮಂಡಳಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ನಮ್ಮಲ್ಲಿ ಬಹುತೇಕರಿಗೆ ಒಪ್ಪಿಗೆಯಿಲ್ಲದೆ ಇರುವುದರಿಂದ, ರಾಜ್ಯಗಳ ನಡುವೆ ಒಮ್ಮತ ಮೂಡಿದ ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲಾಗುವುದು. ಇನ್ನು ಮತ್ತೆ ಜಿಎಸ್‌ಟಿ ಮಂಡಳಿಯ 49ನೇ ಸಭೆಯನ್ನು ದೆಹಲಿಯಲ್ಲಿ ಇದೇ ಫೆಬ್ರವರಿ 18 ರಂದು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.