ಕೃಷ್ಣರಾಜಪೇಟೆ: ಯುವ ಜನರು ಸಾಧಿಸುವ ಗುಣಗಳನ್ನು ಮೈಗುಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸೇವಾ ಮನೋಭಾವನೆ ಮತ್ತು ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಪ್ರಾಧ್ಯಾಪಕ ಕೃಷ್ಣಮೂರ್ತಿ ಕರೆ ನೀಡಿದರು.
ಅವರು ಕೃಷ್ಣರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರೆಡ್ ಕ್ರಾಸ್ ಹಾಗೂ ರಾಷ್ಟೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಹಾಸು ಹೊಕ್ಕಾಗುವುದರಿಂದ ರಾಕ್ಷಸಿ ಗುಣಗಳು ದೂರಾಗಿ ಮಾನವತೆಯ ಸಂಸ್ಕಾರ ಮೂಡಿ ಪರಿಪೂರ್ಣವಾದ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ನಾವು ಪರಿಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನೆರವಾಗುವುದರಿಂದ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಆಧ್ಯತೆಯನ್ನು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಇನ್ನು ವಿದ್ಯಾರ್ಥಿ ಜೀವನವು ಚಿನ್ನದ ಜೀವನವಾದ್ದರಿಂದ ವಿದ್ಯಾರ್ಥಿಗಳು ಶ್ರದ್ದಾ ಭಕ್ತಿಯಿಂದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು. ಪದವಿ ಶಿಕ್ಷಣವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲೆ ಎಚ್. ಎಂ.ಹೇಮಲತಾ ಮಾತನಾಡಿ, ವಿದ್ಯಾರ್ಥಿಗಳಿಗೆ ವಿನಯವಂತಿಕೆ ಹಾಗೂ ಸಂಸ್ಕಾರ ಗುಣಗಳು ಭೂಷಣವಾಗಬೇಕು. ಈ ದಿಕ್ಕಿನಲ್ಲಿ ಶಿಕ್ಷಣದ ಸಂಸ್ಕಾರದ ಜತೆಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಯ ಮೂಲಕ ಸಮಗ್ರವಾದ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಮಾಡುತ್ತಿರುವ ಆಧ್ಯಾಪಕರು ವಿದ್ಯಾರ್ಥಿಗಳ ಬೆಳವಣಿಗೆಯನ್ನು ಸಂಭ್ರಮಿಸುತ್ತಿದ್ದಾರೆ ಎಂದರು.
ಇನ್ನು ಕಾಲೇಜಿನಲ್ಲಿ ನಡೆಯುವ ಪಠ್ಯತರ ಚಟುವಟಿಕೆಗಳು ವಿದ್ಯಾರ್ಥಿಗಳ ಮುನ್ನಡೆಗೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಗುಣಮಟ್ಟದ ಶಿಕ್ಷಣದ ಅನುಷ್ಠಾನಕ್ಕಾಗಿ ದುಡಿಯುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶವನ್ನು ತಂದುಕೊಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಎತ್ತಿ ಹಿಡಿಯಲು ಮುಂದಾಗಬೇಕು ಎಂದು ಹೇಮಲತಾ ಸಲಹೆ ನೀಡಿದರು.
ಪ್ರಾಧ್ಯಾಪಕರಾದ ರುದ್ರ, ಜಯಕೀರ್ತಿ, ಕುಮಾರಸ್ವಾಮಿ, ಗಿರೀಶ, ಭಾಗ್ಯಜ್ಯೋತಿ, ಎಂ. ಸುರೇಶ, ಮೋಹನಕುಮಾರ್, ಕಿರಣಕುಮಾರ್, ಪುಷ್ಪಲತಾ, ಪತ್ರಾಂಕಿತ ವ್ಯವಸ್ಥಾಪಕರಾದ ಬಿ.ಎ.ಮಂಜುನಾಥ್, ಭುವನೇಶ್ವರಿ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.
– ವರದಿ ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ