ಚಿನ್ನ ಕದ್ದು ಗಿರಿವಿ ಇಟ್ಟು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು


ಮೈಸೂರು: ಚಿನ್ನ ಕದ್ದು, ಅದನ್ನು ಗಿರಿವಿ ಇಟ್ಟು, ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬ್ಯಾಡರಪುರದ ಮೋಹನ್ ಕುಮಾರ್ (31) ಹತ್ಯೆಯಾದ ಯುವಕ. ಆರೋಪಿಗಳು ಯುವಕ 60 ಗ್ರಾಂ ಚಿನ್ನ ಕದ್ದ ಎಂದು ಕಾರಿನಲ್ಲೇ ಹೊಡೆದು ಕೊಂದು ನಂತರ ಆತನ ದೇಹವನ್ನು ಸುಟ್ಟು ಹಾಕಿದ್ದರು.
ಮೈಸೂರು ಜಿಲ್ಲಾ ಪೊಲೀಸರು ಅಪರಿಚಿತ ಶವ ಸುಟ್ಟು ಹಾಕಿದ್ದ ಪ್ರಕರಣ ದಾಖಲಿಸಿಕೊಂಡು ಬಳಿಕ ಶೋಧಕಾರ್ಯದಲ್ಲಿ ತೊಡಗಿದರು. ಈಗ ಅದನ್ನು ಭೇದಿಸಿದ್ದಾರೆ. ಹೀಗಾಗಿ ಕಳೆದ ಏಪ್ರಿಲ್ 18 ರಂದು ಮೈಸೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಒಟ್ಟು 4 ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಮೈಸೂರು ಮೂಲದ ಶ್ರೀನಿವಾಸ್ ಪ್ರಮುಖ ಆರೋಪಿ. ಮೋಹನ್ ಕುಮಾರ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ ಮತ್ತು ದರ್ಶನ್ ಎಂಬುವರನ್ನು ಬಂಧಿಸಲಾಗಿದೆ. ಕೊಲೆಯಾದ ಮೋಹನ್ ಕುಮಾರ್ ಬೋಗಾದಿಯಲ್ಲಿರುವ ಲಾಡ್ಜ್ ಒಂದರ ಮ್ಯಾನೇಜರ್ ಆಗಿದ್ದರು.
ಕೊಲೆ ಆರೋಪಿ ಶ್ರೀನಿವಾಸ್ ಇಸ್ಪೀಟ್ ಆಡಲು ಲಾಡ್ಜ್‌ಗೆ ಬರುತ್ತಿದ್ದ. ಶ್ರೀನಿವಾಸ್ ಜೂಜಾಟಕ್ಕಾಗಿ ತನ್ನ ಪತ್ನಿಯ 60 ಗ್ರಾಂ ಚಿನ್ನದ ಸರವನ್ನು ತಂದಿದ್ದ. ಆ ದಿನ ಹುಣ್ಣಿಮೆ ಇದ್ದ ಕಾರಣ ಅದನ್ನು ಗಿರವಿ ಇಟ್ಟುಕೊಳ್ಳಲ್ಲ ಎಂದು ಮಾರ್ವಾಡಿ ಅಂಗಡಿಯವನು ಹೇಳಿದ್ದ.
ನಂತರ, ಶ್ರೀನಿವಾಸ್ ಲಾಡ್ಜ್ ಕೋಣೆಯಲ್ಲಿ ಹಾಸಿಗೆಯ ದಿಂಬಿನ ಕೆಳಗೆ ಚಿನ್ನದ ಸರವನ್ನು ಇಟ್ಟಿದ್ದ. ಅದೇ ಸಮಯದಲ್ಲಿ, ಮೋಹನ್ ಕುಮಾರ್ ಚಿನ್ನದ ಸರವನ್ನು ಕದ್ದಿದ್ದ. ನಂತರ, ಅವನು ತನ್ನ ಊರಾದ ಬ್ಯಾಡರಪುರಕ್ಕೆ ಹೋಗಿ, ಕದ್ದ ಚಿನ್ನದ ಸರವನ್ನು ಅಡವಿಟ್ಟು ನಿಶ್ಚಿತಾರ್ಥ ಮಾಡಿಕೊಂಡನು.

ಈ ಸಂಬಂಧ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀನಿವಾಸ್ ತನ್ನ ಸ್ನೇಹಿತರ ತಂಡವನ್ನು ರಚಿಸಿ, ಮನೆಯಿಂದ ಮೋಹನ್ ಕುಮಾರ್ ಅವರನ್ನು ಕರೆಸಿ, ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾನೆ.
ನಂತರ ಆರೋಪಿಗಳು ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಯಾರಿಗೂ ತಿಳಿಯದಂತೆ ಹಗಲು ಹೊತ್ತಿನಲ್ಲೇ ಶವವನ್ನು ಸುಟ್ಟು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ನಿಗೂಢತೆ ಬಯಲಾಗಿದೆ.
Related

 








