ಹಾಸನ: ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಖರೀದಿ ಮಾಡೋದಂತೂ ದೂರದ ಮಾತಾಗಿಬಿಟ್ಟಿದೆ. ಈ ಬೆಲೆ ಏರಿಕೆ ಬೇಡಿಕೆ ಮಾತ್ರ ತಗ್ಗಿಲ್ಲ. ಇದರ ಲಾಭದಲ್ಲಿ ಭರ್ಜರಿಯಾಗಿ ಟೊಮ್ಯಾಟೋ ಬೆಳೆದ ಪೊಲೀಸಪ್ಪನೊಬ್ಬ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ.
ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಸದ್ಯ ಟೊಮ್ಯಾಟೋವನ್ನು ಒಂದು ಎಕರೆ 6 ಗುಂಟೆಯಲ್ಲಿ ಬೆಳೆದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಈಗಾಗಲೇ ಸಾವಿರ ಬಾಕ್ಸ್ ಟೊಮ್ಯಾಟೋ ಮಾರಿರುವ ಬೈರೇಶ್ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಟೊಮ್ಯಾಟೋ ಮಾರುವ ನಿರೀಕ್ಷೆಯಲ್ಲಿದ್ದಾರೆ.
ಕಳ್ಳರ ಕಾಟ ತಪ್ಪಿಲ್ಲ: ಸರ್ಕಾರಿ ಕೆಲಸದ ಒತ್ತಡದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಲಕ್ಷಾಂತರ ರೂಪಾಯಿಯ ಲಾಭವನ್ನು ಬೈರೇಶ್ ಪಡೆದಿದ್ದಾರೆ. ಆದರೆ, ಸ್ವತಃ ಪೊಲೀಸ್ ಪೇದೆಯೇ ತಮ್ಮ ಹೊಲದಲ್ಲೂ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ನೂರಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೋವನ್ನು ಖದೀಮರು ಕಳುವು ಮಾಡಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬೈರೇಶ್, ರಾತ್ರಿಯಿಡಿ ಹೊಲದಲ್ಲಿ ಕಾವಲು ಹಾಕಿ ಬೆಳೆ ಕಾಪಾಡಿಳ್ಳುತ್ತಿದ್ದಾರೆ.
ಬೈರೇಶ್ ಕುಟುಂಬ ಖುಷ್: ಮಳೆ ಕೊರತೆ, ರೋಗ ಬಾದೆ ಹಾಗೂ ಕಳ್ಳರ ಕಾಟ ನಡುವೆಯೂ ಬೈರೇಶ್ ಟೊಮ್ಯಾಟೋ ಬೆಳೆದು ಭರ್ಜರಿ ಆದಾಯ ಗಳಿಸಿದ್ದಾರೆ. ಉಡುಪಿ, ಮಂಗಳೂರಿನಿಂದ ಬಂದು ಬಸ್ತಿಯಲ್ಲಿರುವ ಬೈರೇಶ್ ಹೊಲದಲ್ಲಿ ವರ್ತಕರು ಟೊಮ್ಯಾಟೋ ಖರೀದಿ ಮಾಡುತ್ತಿದ್ದಾರೆ. ಹೆಚ್ಚಿನ ಆದಾಯದಿಂದ ಬೈರೇಶ್ ಕುಟುಂಬವೂ ಕೂಡ ತುಂಬಾ ಖುಷಿಯಾಗಿದೆ.