ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆಗಳನ್ನು ಈಗಾಗಲೇ ಆಲಿಸಿದ್ದು, ನೌಕರರ ಸಂಘಟನೆಗಳು ಕೊಟ್ಟ ಮನವಿಯನ್ನು ಸಾರಿಗೆ ಸಚಿವರ ಗಮನಕ್ಕೆ ತರಲಾಗಿದೆ. ಇದೇ ಮಾ.7ರಂದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಚಿವರು ಸಭೆ ಕರೆದಿದ್ದಾರೆ ಎಂದು KSRTC ಎಂಡಿ ಅನ್ಬುಕುಮಾರ್ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದಿನಿಂದ (ಮಾ.4) ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ನೌಕರರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ನೀವು ನಮ್ಮ ಸಂಸ್ಥೆಯ ನೌಕರರು ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಈ ಹಿಂದೆ ಬೇರೊಂದು ಸಂಘಟನೆ ಹಮ್ಮಿಕೊಂಡಿದ್ದ ಧರಣಿಯಲ್ಲೂ ಹೇಳಿದ್ದೇನೆ. ಅದನ್ನೇ ಇಂದು ನಿಮಗೆ ಮತ್ತೆ ತಿಳಿಸುತ್ತಿದ್ದು, ಮಾರ್ಚ್ ಮೊದಲವಾರದಲ್ಲಿ ಅಂದರೆ ಮಾ.7ರಂದು ಸಚಿವರು ಸಭೆ ಕರೆದಿದ್ದಾರೆ. ಅಲ್ಲಿ ನಿಮ್ಮ ಬಹುತೇಕ ಬೇಡಿಕೆಗಳು ಈಡೇರಲಿವೆ ಎಂಬ ಭರವಸೆ ಇದೆ ಎಂದರು.
ಇನ್ನು ನಾವು ಸಂಸ್ಥೆಯ ಅಧಿಕಾರಿಗಳನ್ನು ಜತೆಗೆ ಕರೆದುಕೊಂಡು ಬರುತ್ತಿದ್ದು, ಅವರಿಗೂ ನಿಮ್ಮ ಸಮಸ್ಯೆ ಮತ್ತು ಬೇಡಿಕೆಗಳು ಏನು ಎಂಬುವುದು ಗೊತ್ತಾಗಬೇಕು. ಬಳಿಕ ಅವರು ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲೇ ಅವರನ್ನು ಇಂಥ ಹೋರಾಟದ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದೇವೆ ಎಂದರು.
ಆದರೆ, ಇದೇ ಎಂಡಿ ಅನ್ಬುಕುಮಾರ್ ಅವರು, ಈ ಹಿಂದೆ ನಿವೃತ್ತ ನೌಕರರು ಧರಣಿ ಮಾಡುತ್ತಿದ್ದ ಸ್ಥಳಕ್ಕೂ ಮತ್ತೆ ಇತ್ತೀಚೆಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಸ್ಥಳಕ್ಕೂ ಬಂದು ಇದೇ ಮಾತನ್ನು ಹೇಳಿದ್ದರು. ಆದರೆ, ಅಂದು ಮಾ.3ರಂದು ಸಚಿವರು ಸಭೆ ಕರೆದು ನಿಮ್ಮ ಸಮಸ್ಯೆಗೆ ಪರಿಹಾರ ತಿಳಿಸಲಿದ್ದಾರೆ ಎಂದು ಹೇಳಿದ್ದರು.
ಆದರೆ ಮಾ.3ರಂದು ಸಭೆ ಕರೆಯಲೇ ಇಲ್ಲ. ಆದರೆ ಮತ್ತೆ ಇಂದು ಬಂದು ಆ ಮಾ.3ರಂದು ಎಂದು ಹೇಳಿದ್ದನ್ನು ಬಿಟ್ಟು ಮತ್ತೆ ಈಗ ಮಾ.7ರಂದು ಎಂದು ಹೇಳಿದ್ದಾರೆ. ಅಂದರೆ ಇವರು ನೌಕರರ ಪರ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟವನ್ನು ಕೈ ಬಿಡಲಿ ಎಂಬ ಉದ್ದೇಶದಿಂದ ಈ ರೀತಿ ಹೇಳುತ್ತಿದ್ದಾರೋ ಇಲ್ಲ ಸರ್ಕಾರವೇ ಇವರನ್ನು ಈ ರೀತಿ ಹೇಳಿ ಎಂದು ಗಿಳಿಪಾಠ ಮಾಡಿದೆಯೋ ಗೊತ್ತಾಗುತ್ತಿಲ್ಲ.
ಇದನ್ನು ಗಮನಿಸಿದರೆ ಒಂದು ನಿಗಮದ ಎಂಡಿಯಾಗಿ ನಡೆದುಕೊಳ್ಳುವ ಬದಲಿಗೆ ಇವರು ರಾಜಕೀಯ ಪಕ್ಷದ ವ್ಯಕ್ತಿಯಂತೆ ಭರವಸೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನಿಗಮದ ನೌಕರರು ಕೇಳಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇದ್ದಾರೆ. ಈ ಬಗ್ಗೆ ಎಂಡಿ ಅವರೆ ಸ್ಪಷ್ಟನೆ ನೀಡಿದರೆ ಉತ್ತಮ ಎನ್ನುವುದು ನಮ್ಮ ಸಲಹೆ.
ಇನ್ನು ಈ ರೀತಿಯ ಪೊಳ್ಳು ಭರವಸೆಗಳನ್ನು ಕೇಳಿ ಕೇಳಿ ಕಿವಿಗಳನ್ನು ತೂತು ಬೀಳಿಸಿಕೊಂಡಿರುವ ಸಂಘಟನೆಗಳ ಮುಖಂಡರು ನೀವು ಮಾ.7ರಂದು ಸಭೆ ಕರೆಯಿರಿ ಅಲ್ಲಿ ನೀವು ನೌಕರರ ಬೇಡಿಕೆಗಳನ್ನು ಈಡೇರಿಸಿದರೆ ನಾವು ಇಲ್ಲಿ ಧರಣಿ ಕೈ ಬಿಡುತ್ತೇವೆ ಎಂದು ಬಹಳ ವಿನಯದಿಂದಲೇ ಹೇಳಿ ತಮ್ಮ ಧರಣಿಯನ್ನು ಮುಂದುವರಿಸಿದ್ದಾರೆ.
ಬೇಡ ಬೇಡ ನಮ್ಮ ಮಾತಿಗೆ ಗೌರವಕೊಟ್ಟು ನೀವು ಎಕ್ಸಲೇಟರ್ ಪ್ಯಾಡ್ ಒತ್ತುವ ಬದಲಿಗೆ ಬ್ರೇಕ್‌ಪ್ಯಾಡ್ ಒತ್ತಿ ಎಂದು ವ್ಯವಸ್ಥಾಪಕ ನಿರ್ದೇಶಕರು ಧರಣಿ ಇಲ್ಲಿಗೆ ಬಿಡಿ ಎಂದು ಮನವಿ ಮಾಡಿದರು. ಅದಕ್ಕೆ ಅಷ್ಟೇ ನಯವಾಗಿಯೇ ಶಾಂತಿಯುತವಾಗಿ ನಾವು ಧರಣಿ ಮಾಡುತ್ತೇವೆ ಯಾವುದೇ ರೀತಿಯ ಬಸ್ ನಿಲ್ಲುವುದಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತೇವೆ. ಅದರಂತೆ ನೀವು ಕೂಡ ನಡೆದುಕೊಳ್ಳಬೇಕು ಎಂದು ಹೇಳಿರುವುದಾಗಿ ಸಮಾನ ಮನಸ್ಕರ ವೇದಿಕೆ ಮುಖಂಡರು ತಿಳಿಸಿದ್ದಾರೆ.
ಒಟ್ಟಾರೆ ಧರಣಿ ಮುಂದುವರಿದಿದ್ದು, ಬಹುಶಃ ಮಾ.7ರವರೆಗೂ ನಡೆಯಲಿದೆ. ಅಂದು ನೌಕರರಿಗೆ ಸಿಹಿ ಸುದ್ದಿ ಸಿಕ್ಕರೆ ಹೋರಾಟ ಅಂತ್ಯಕಾಣಲಿದೆ ಇಲ್ಲದಿದ್ದರೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದರ ಬಗ್ಗೆ ಹೇಳುವುದಕ್ಕೆ ಈಗಲೇ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.