
ಬೆಂಗಳೂರು: “ಮನೆ ಬಾಗಿಲಿಗೆ ಉಚಿತವಾಗಿ ಖಾತೆ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ, ಅಕ್ರಮ ನಿರ್ಮಾಣಗಳ ಪತ್ತೆಗೆ ‘ಎ.ಐ’ ತಂತ್ರಜ್ಞಾನದ ಬಳಕೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
2025- 26 ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜತೆ ಸಭೆ ಬಳಿಕ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
“ನಗರದ ಸುಮಾರು 7 ಲಕ್ಷ ಮನೆಗಳು ತೆರಿಗೆ ಕಟ್ಟಿರಲಿಲ್ಲ, ಇವುಗಳಲ್ಲಿ 1 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದ ಕಾರಣ ಒಂದು ಬಾರಿ ಪಾವತಿಗೆ ಅವಕಾಶ (ಓ.ಟಿ.ಎಸ್) ಮಾಡಿಕೊಡಲಾಯಿತು. ಅಕ್ರಮ ನಿರ್ಮಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಕಳೆದ ವಾರ ಸದನದಲ್ಲಿ ಈ ಬಗ್ಗೆ ವಿಧೇಯಕ ಅಂಗೀಕಾರ ವಾಗಿದೆ. ಜೊತೆಗೆ ಕಂದಾಯ ಬಡಾವಣೆಗಳಲ್ಲಿ ಇರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಲಾಗುವುದು” ಎಂದರು.
ಎಐ ಮೂಲಕ ಅಕ್ರಮ ನಿರ್ಮಾಣಗಳ ಪತ್ತೆ:
“ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಬೇಕು. ನೀರು, ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನೀಡಿದ್ದೇವೆ. ಆದರೆ ಅನೇಕರು ಇದಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ‘ಎ.ಐ’ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಕಟ್ಟಡವನ್ನು ಎಷ್ಟು ವಿಸ್ತೀರ್ಣ, ಎತ್ತರ ಕಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಜತೆಗೆ ಪ್ರತಿಯೊಂದು ಮನೆಯ ದಾಖಲೆಯೂ ಸಿಗುತ್ತದೆ” ಎಂದು ವಿವರಿಸಿದರು.
ಅಧಿಕಾರಿಗಳ ಅಮಾನತು ಮಾಡಿ:
“ಮನೆ, ನಿವೇಶನ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅಂತಹವರನ್ನು ನನ್ನ ಗಮನಕ್ಕೆ ತರದೆಯೂ ಕೂಡಲೇ ಅಮಾನತು ಮಾಡಿ ಎಂದು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇತ್ತೀಚೆಗೆ ಅನೇಕ ದಂಡ ಶುಲ್ಕಗಳ ಮೊತ್ತವನ್ನು ಕೂಡ ಕಡಿಮೆ ಮಾಡಲಾಗಿದೆ. ನಗರದ ವ್ಯಾಪ್ತಿಯ ಎಲ್ಲಾ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ” ಎಂದು ತಿಳಿಸಿದರು.
“ಮನೆ ನಿರ್ಮಾಣ ವಿಚಾರದಲ್ಲಿ ಶೇ. 50 ರಷ್ಟು ಗುಂಪು ಮನೆಗಳು, ಶೇ. 50 ರಷ್ಟು ಒಂಟಿ ಮನೆಗಳು ಮಾಡಬೇಕು ಎನ್ನುವ ಸಲಹೆಯನ್ನು ಸಚಿವರು/ಶಾಸಕರು ನೀಡಿದ್ದಾರೆ” ಎಂದು ಹೇಳಿದರು.
ಮನೆ ಬಾಗಿಲಿಗೆ ಉಚಿತ ಖಾತೆ ಏಪ್ರಿಲ್ ನಿಂದ ಜಾರಿ:
“ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮಕ್ಕೆ ಏಪ್ರಿಲ್ ತಿಂಗಳಿನಿಂದ ಚಾಲನೆ ದೊರೆಯಲಿದೆ. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಕಸ್ಮಾತ್ ತಪ್ಪಿಹೋಗಿದ್ದಲ್ಲಿ ಅಂತವರು ತಮ್ಮ ದಾಖಲೆಗಳನ್ನು ಮತ್ತೆ ನೀಡಬಹುದು. ಬೆಂಗಳೂರು ನಗರದ ಪ್ರತಿ ಕ್ಷೇತ್ರದ ಶಾಸಕರ ಬಳಿ ಮಾತನಾಡಿ, ಕ್ಷೇತ್ರವಾರು ಕಾರ್ಯಕ್ರಮ ನಡೆಸಿ ಈ ಬಗ್ಗೆ ಅರಿವು ಮೂಡಿಸಲಾಗುವುದು” ಎಂದರು.
ಸರ್ಕಾರದಿಂದ ದಾಖಲೆಯುತ ಅನುದಾನ:
“ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಗೆ ನೀಡುತ್ತಿರುವ ಅನುದಾನವನ್ನು 4 ಸಾವಿರ ಕೋಟಿ ರೂಪಾಯಿಯಿಂದ 7 ಸಾವಿರ ಕೋಟಿಗೆ ಹೆಚ್ಚಳ ಮಾಡಿದೆ. ಎಫ್.ಎ.ಆರ್, ಜಾಹೀರಾತಿನಿಂದ ಪಾಲಿಕೆಗೆ ಆದಾಯ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು. ನ್ಯಾಯಾಲಯ ಜಾಹೀರಾತು ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕಾರಣ ಇದರಿಂದ ನಿರೀಕ್ಷಿತ ಆದಾಯ ಕಷ್ಟಸಾಧ್ಯ. ನ್ಯಾಯಾಲಯವು ಈ ಹಿಂದೆ ಎರಡು- ಮೂರು ವಿಚಾರದಲ್ಲಿ ಹೀಗೆ ಮಧ್ಯಪ್ರವೇಶ ಮಾಡಿದ ಕಾರಣ ನಾವು ಜಾಗೃತರಾಗಿ ಬಜೆಟ್ ಮಂಡಿಸಬೇಕಾಗುತ್ತದೆ. ಈ ಬಾರಿಯ ರಾಜ್ಯ ಬಜೆಟ್ ಅಲ್ಲಿ ಮಾನ್ಯ ಸಿ.ಎಂ. ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಡಬಲ್ ಡೆಕ್ಕರ್, ಮೆಟ್ರೋ, ಮೇಲ್ಸೇತುವೆ, ಸುರಂಗ ರಸ್ತೆಗೆ ಹಣ ಕೊಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಯಾವುದೇ ಸರ್ಕಾರವೂ ಬೆಂಗಳೂರಿಗೆ ಇಷ್ಟು ಹೆಚ್ಚಿನ ಅನುದಾನ ನೀಡಿರಲಿಲ್ಲ. ಈಗ ಬೆಂಗಳೂರಿಗೆ ಅತಿಹೆಚ್ಚು ಅನುದಾನ ನೀಡಿದೆ” ಎಂದರು.
“ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆಬದಿ ಮಳಿಗೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ. ಈಗ ಸುಮಾರು 3,778 ಜನ ತಳ್ಳುವ ಗಾಡಿ ನೀಡಿ ಎಂದು ಅರ್ಜಿ ಹಾಕಿದ್ದಾರೆ. ನಾವು ಈ ವರ್ಷ ಪಾಲಿಕೆಯಿಂದ ಸುಮಾರು 10, 000 ತಳ್ಳುವ ಗಾಡಿಗಳನ್ನು ನೀಡಲು ತಯಾರಿದ್ದೇವೆ. ತಳ್ಳುವ ಗಾಡಿ ಬೇಕಾದವರು ನೋಂದಣಿ ಮಾಡಿಕೊಳ್ಳಬೇಕು. ಗಾಡಿಯನ್ನು ಸುಮ್ಮನೆ ನಿಲ್ಲಿಸಿಕೊಳ್ಳುವಂತಿಲ್ಲ. ಪ್ರತಿದಿನ ಎಲ್ಲಿ, ಯಾವ ಜಾಗದಲ್ಲಿ ವಹಿವಾಟು ನಡೆಸಲಾಯಿತು ಎನ್ನುವ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳುವುದು, ಮತ್ತೊಬ್ಬರಿಗೆ ಮಾರುವುದಕ್ಕೆ ಅವಕಾಶವಿಲ್ಲ” ಎಂದರು.
ನೋಂದಣಿ ಕಾಲಮಿತಿ ಏಪ್ರಿಲ್ ಕೊನೆವರೆಗೂ ವಿಸ್ತರಣೆ:
“ಇದುವರೆಗೂ ಪಾಲಿಕೆಯಿಂದ 27,565 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ದಿನಾಂಕವನ್ನು ಏಪ್ರಿಲ್ ಕೊನೆಯವರೆಗೆ ವಿಸ್ತರಿಸಲಾಗುವುದು. ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳನ್ನು ಗಡುವು ನಂತರ ತೆರವುಗೊಳಿಸಲಾಗುವುದು. ನೋಂದಣಿ ಮಾಡಿಕೊಂಡವರಿಗೆ ಸಹಾಯಧನ ನೀಡಿ ತಳ್ಳುವ ಗಾಡಿಗಳನ್ನು ನೀಡಲಾಗುವುದು. ನಾಲ್ಕು ಮಾದರಿಯ ತಳ್ಳು ಗಾಡಿಗಳನ್ನು ಪಾಲಿಕೆ ಸಿದ್ಧಪಡಿಸಿದೆ” ಎಂದರು.
“ಬೀದಿಬದಿ ವ್ಯಾಪಾರದ ಗಾಡಿಗಳು ಆಟೋ, ಬೈಸಿಕಲ್, ಬೈಕ್ ಹಾಗೂ ಸಾಂಪ್ರದಾಯಿಕ ತಳ್ಳುವ ಗಾಡಿ ಮಾದರಿಯಲ್ಲಿ ಇರಲಿವೆ. ಇವುಗಳನ್ನು ತಯಾರಿಸಲು ಟೆಂಡರ್ ಸಹ ಕರೆಯಲಾಗುವುದು. ನೋಂದಣಿ ಮಾಡಿಸಿಕೊಂಡವರ ಪೈಕಿ ಶೇಕಡವಾರು ಪ್ರಮಾಣದಲ್ಲಿ ಈ ಸೌಲಭ್ಯ ನೀಡಲಾಗುವುದು. ವ್ಯಾಪಾರ ಮುಗಿದ ನಂತರ ಗಾಡಿಗಳನ್ನು ಅಲ್ಲಿಯೇ ನಿಲ್ಲಿಸುವಂತಿಲ್ಲ. ಪ್ರತಿ ಬೀದಿ ಬದಿ ವ್ಯಾಪಾರಿಗಳ ಲೆಕ್ಕಾಚಾರ ಪಾಲಿಕೆ ಬಳಿ ಇರಬೇಕು. ಪೊಲೀಸರು, ಅಧಿಕಾರಿಗಳು, ಗೂಂಡಾಗಳು ತೊಂದರೆ ಕೊಡುತ್ತಾರೆ ಎನ್ನುವ ದೂರುಗಳನ್ನು ತಪ್ಪಿಸಲು ಈ ವ್ಯವಸ್ಥೆ ತರಲಾಗುತ್ತಿದೆ. “ಒಂದು ಕುಟುಂಬಕ್ಕೆ ಒಂದೇ ಗಾಡಿ” ಎಂದು ತಿಳಿಸಿದರು.
ಶೀಘ್ರ ಬಿಬಿಎಂಪಿ ಚುನಾವಣೆ:
ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದ ಬಗ್ಗೆ ಕೇಳಿದಾಗ, “ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇದರ ಬಗ್ಗೆ ವಿಪಕ್ಷಗಳು ಜಂಟಿ ಸದನ ಸಮಿತಿ ರಚಿಸುವಂತೆ ಮನವಿ ಮಾಡಿದ್ದವು. ಈಗಾಗಲೇ ಅನೇಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ರಾಜ್ಯಪಾಲರು ಎಷ್ಟು ಬೇಗ ಸಹಿ ಹಾಕಿ ಕಳುಹಿಸುತ್ತಾರೋ ಅಷ್ಟು ಬೇಗ ಪ್ರದೇಶಗಳನ್ನು ಗುರುತಿಸಿ, ಶಾಸಕರ ಬಳಿ ಮತ್ತೊಮ್ಮೆ ಚರ್ಚೆಮಾಡಿ ಚುನಾವಣೆಗೆ ತೆರಳುತ್ತೇವೆ. 73, 74ನೇ ತಿದ್ದುಪಡಿ ಬಗ್ಗೆ ನಮಗೆ ಬದ್ಧತೆಯಿದೆ” ಎಂದರು.
“ಬೆಂಗಳೂರು ನಗರದ ಚುನಾಯಿತ ಪ್ರತಿನಿಧಿಗಳು ಬಿಬಿಎಂಪಿ ಬಜೆಟ್ ಬಗ್ಗೆ ಚರ್ಚೆ, ಸಲಹೆ ಸೂಚನೆ ವೇಳೆ ತಮ್ಮ ಕ್ಷೇತ್ರದ ಬೇಡಿಕೆಗಳು, ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಬಜೆಟ್ ಮಂಡಿಸಲಾಗುವುದು
ಸಭೆಯಲ್ಲಿ ಮಾನ್ಯ ಸಚಿವರುಗಳಾದ ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ಶಾಸಕರಾದ ಎಸ್.ಟಿ ಸೋಮಶೇಖರ್, ರಿಜ್ವಾನ್ ಹರ್ಷದ್, ಎ.ಸಿ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ನಾಗರಾಜ್ ಯಾದವ್, ಸುಧಾಮದಾಸ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಪಾಲಿಕೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.