ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಅವರು ಮೊದಲಿನಿಂದಲೂ ಜಾತ್ಯತೀತ ನಿಲುವಿನಲ್ಲಿ ನಂಬಿಕೆಯಿಟ್ಟಿರುವವರು. ಹೀಗಾಗಿ ಸಭಾಪತಿ ಸ್ಥಾನ ಹೊಂದಾಣಿಕೆಗಾಗಿ ಬಿಜೆಪಿ ಜತೆ ಹೋಗದಿರುವುದೇ ಸೂಕ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆಯಷ್ಟೇ ಉಪಸಭಾಪತಿ ಚುನಾವಣೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಆಗಲಿದೆ ಎಂದು ತಿಳಿಸಿದರು.
ಇನ್ನು ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕೆಂದರು.
ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದಾರೆ. ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ಬಂದು ರಸ್ತೆಯಲ್ಲಿ ಮೊಳೆ ಹೊಡೆದಿದ್ದಾರೆ. ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ರೈತರ ಹೆಸರಲ್ಲಿ ಅವರ ಮುಖವಾಡ ಹೊರ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಯವರು ತಕ್ಕ ಪಲ ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದ ಅವರು, ರೈತರು ಅನ್ನ ದಾತರು, ದೇಶದ ಬೆನ್ನೆಲುಬು ಎಂದು ಬಿಜೆಪಿ ಹೇಳಿಕೆಯಲ್ಲೊಂದು ಮನಸಿನಲ್ಲೊಂದು ಇಟ್ಟುಕೊಂಡಿದೆ ಎಂದು ಕಿಡಿಕಾರಿದರು.