ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿವಂಗತ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.
ಸತ್ಯನಾರಾಯಣ ಅವರ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆದಿತ್ತಾದರೂ ಅಂತಿಮ ಕ್ಷಣದಲ್ಲಿ ಸತ್ಯನಾರಾಯಣ ಅವರ ಪತ್ನಿ ಅವರನ್ನೇ ಅಭ್ಯರ್ಥಿಯಾಗಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೀರ್ಮಾನ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಶಿರಾದಲ್ಲಿ ಈ ಬಾರಿಯೂ ತ್ರಿಕೋನ ಪೈಪೋಟಿಗೆ ಶಿರಾ ಕ್ಷೇತ್ರ ಸಜ್ಜಾಗಿದೆ.
ಶಿರಾ ಕ್ಷೇತ್ರದ ಉಪಚುನಾವಣೆ #ಜನತಾದಳ ಅಭ್ಯರ್ಥಿಯಾಗಿ ದಿವಂಗತ ಸತ್ಯನಾರಾಯಣಅವರ ಪತ್ನಿ ಶ್ರೀಮತಿ ಅಮ್ಮಾಜಮ್ಮ ಕಣಕ್ಕೆ pic.twitter.com/lldL92NwAc
— ಜೆಡಿಎಸ್ ನ್ಯೂಸ್ – JDS NEWS (@Jds_news) October 6, 2020
ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಹಾಗೂ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಹಿರಿಯ ಮುಖಂಡ ಜಯಚಂದ್ರ ಅವರನ್ನೇ ಕಣಕ್ಕಿಳಿಸುವುದಾಗಿ ಕಳೆದ ಹದಿನೈದು ದಿನದ ಹಿಂದೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲೇ ತೀರ್ಮಾನ ಕೈಗೊಂಡಿದೆ.
ಇನ್ನು ಕ್ಷೇತ್ರದಲ್ಲಿ ಅಷ್ಟೇನೂ ಬೆಂಬಲ ಇಲ್ಲದಿದ್ದರೂ ಆಡಳಿತ ಪಕ್ಷದ ಹಮ್ಮಿನಿಂದಲೇ ಬಿಜೆಪಿಯೂ ಸ್ಪರ್ಧೆಗಿಳಿದಿದ್ದು, ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶ್ ಗೌಡ ಅವರನ್ನು ಹುರಿಯಾಳಾಗಿಸಲಿದೆ.
ಮೂರೂ ಪಕ್ಷಗಳೂ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಈ ನಡುವೆ ಡಿಕೆಶಿಗೆ ಸಿಬಿಐ ಗಾಳ ಹಾಕಿರುವುದು ಕಾಂಗ್ರೆಸ್‌ನಲ್ಲಿ ಸ್ವಲ್ಪಮಟ್ಟಿಗೆ ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ.