ಬೆಂಗಳೂರು: ಸಾರಿಗೆ ನೌಕರರ ಸಂಘಟನೆಗಳು ಜಂಟಿಯಾಗಿ ಮತ್ತು ಏಕಾಂಗಿಯಾಗಿ ನೌಕರರ ಪರ ಧ್ವನಿ ಏರಿಸುತ್ತಿದ್ದು, ಕಳೆದ ಸುಮಾರು ಏಳು ವರ್ಷಗಳಿಂದಲೂ ವೇತನ ಹೆಚ್ಚಳ ಮಾಡದೆ ನೌಕರರ ಹಿಂಡಿ ಹಿಪ್ಪೆ ಮಾಡುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲು ಸಜ್ಜಾಗುತ್ತಿವೆ.
ಹೌದು, ಒಂದು ಕಡೆ ಬಳ್ಳಾರಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನಾಳೆ (ಅ.10)ಯಿಂದ ಸೈಕಲ್ ಜಾಥಾ ಹಮ್ಮಿಕೊಂಡಿದೆ. ಇತ್ತ ಅ.11ರಂದು ಕರಾರಸಾ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರಿನಲ್ಲಿ ಸಮೇಶ ಹಮ್ಮಿಕೊಂಡಿದೆ.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಕಳೆದ 2021ರ ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ತಟ್ಟೆ ಚಳವಳಿ ಮಾಡಿದ ನೌಕರರು ಮತ್ತು ಅವರ ಕುಟುಂಬದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಕೀಲರನ್ನು ಸಂಪರ್ಕಿಸಿದೆ.
ಹೀಗೆ ನೌಕರರ ಪರ ಏಕಾಂಗಿಯಾಗಿ ಮತ್ತು ಜಂಟಿಯಾಗಿ ಸಾರಿಗೆ ನೌಕರರ ಪರ ಸಂಘಟನೆಗಳು ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಹೋರಾಟಕ್ಕೆ ಚಾಲನೆ ನೀಡುತ್ತಿವೆ. ಇದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈಗ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತಿದೆ.
ಸಾರ್ವಜನಿಕರ ಅಗತ್ಯ ಸೇವೆಯಾಗಿರುವ ಸಾರಿಗೆ ನಿಗಮಗಳಲ್ಲಿ ತಳಪಾಯವಾಗಿರುವ ಮತ್ತು ಆದಾಯ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡು ನೌಕರರ ಮತ್ತು ಅವರ ಕುಟುಂಬದವರ ವಿರುದ್ಧವೇ ಎಸಿ ಕಚೇರಿಯಲ್ಲಿ ಕುಳಿತ ಕೆಲ ಅಧಿಕಾರಿಗಳ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬ ಅಭಿಯಾನ ಆರಂಭವಾಗುತ್ತಿದೆ.
ಇತ್ತ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಕಾಂಗ್ರೆಸ್ ಪೋಸ್ಟರ್ಗಳನ್ನು ಅಂಟಿಸಿ ಬಿಜೆಪಿ ನೇತೃತ್ವದ ಸರ್ಕಾರದ ಬಲವನ್ನು ಕುಗ್ಗಿಸುತ್ತಿದೆ. ಇನ್ನುಸಾರಿಗೆ ನೌಕರರಿಗೆ ಇದೇ ಸರ್ಕಾರ ಕಳೆದ 2020ರ ಡಿಸೆಂಬರ್ನಲ್ಲಿ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸಲು ಮುಂದಾಗದಿರುವುದಕ್ಕೆ ಎಎಪಿ ರಾಜ್ಯ ನಾಯಕರು ಹೋರಾಟ ಮಾಡಿ ಇನ್ನಷ್ಟು ಬಿಜೆಪಿಯ ಇಮೇಜಿಗೆ ಹೊಡೆತ ನೀಡಿದ್ದಾರೆ.
ಈ ಎಲ್ಲದರ ನಡುವೆ ಸಿಕ್ಕುಹಾಕಿಕೊಂಡು ನರಳುತ್ತಿರುವ ರಾಜ್ಯ ಸರ್ಕಾರ ಅತ್ತ ಕೇಂದ್ರದ ನಾಯಕರ ಮಾತನ್ನು ಮೀರಲಾಗದೆ ಇತ್ತ ನೌಕರರ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕಲ್ಲೂ ಸಾಧ್ಯವಾಗದೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡು ನರಳುವ ಪರಿಸ್ಥಿತಿಗೆ ತಲುಪುತ್ತಿದೆ. ಇದರಿಂದ ಆಚೆ ಬರಬೇಕು ಎಂದರೆ ಸದ್ಯ ಇರುವ ಒಂದೇ ಒಂದು ಮಾರ್ಗ ನೌಕರರಿಗೆ 2020ರ ಡಿಸೆಂಬರ್ನಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಬೇಕು.
ಇಲ್ಲದೆ ಹೋದರೆ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಹೀಗೆ ನೌಕರರ ಸಂಘಟನೆಗಳು ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಇದಾವುದನ್ನು ಮಾಡದೆ ಹೋದರೆ ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕಟ್ಟಿಕೊಂಡಿರುವ ಆಶಾಗೋಪುರವನ್ನು ತಾವಾಗೇ ಕೆಡವಬೇಕು. ಇದು ಬಿಟ್ಟರೆ ಬೇರೆ ದಾರಿ ಬಿಜೆಪಿಗೆ ಇಲ್ಲ.
ಇದನ್ನು ಮೀರಿ ನಡೆದುಕೊಳ್ಳೋಣ ಎಂದರೆ ಅತ್ತ ವಿಪಕ್ಷಗಳು ಇತ್ತ ನೌಕರರ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಖಾರುತ್ತಿರುವ ಬೆಂಕಿಯ ಹೊಡೆತಕ್ಕೆ ಸಲುಕಿ ನರಳುವುದು ಬಿಟ್ಟಿರೆ ಬೇರೆ ದಾರಿ ಸದ್ಯಕ್ಕಂತು ಇಲ್ಲ. ಹೀಗಾಗಿ ಇನ್ನು ಕಾಲ ಮಿಂಚಿಲ್ಲ ನೌಕರರ ನ್ಯಾಯಯುತ ಬೇಡಿಕೆಯನ್ನು ಹೋರಾಟ ಮಾಡುವ ಮುನ್ನಾ ಪರಿಹರಿಸಲು ಮುಂದಾಗಬೇಕು. ಇಲ್ಲ ಬರುವ ಸಮಸ್ಯೆಯನ್ನು ಎದುರಿಸಲು ಸಜ್ಜಾಗಬೇಕು ಅಷ್ಟೇ.
ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ 11-10-2022 ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಾರಿಗೆ ನೌಕರರ ಸಮಾವೇಶವನ್ನುಆಯೋಜನೆ ಮಾಡಿದೆ. ಬಳಿಕ 20-10-2022 ಗುರುವಾರ ಕಲಬುರಗಿ ಹಾಗೂ 28-10-2022 ಶುಕ್ರವಾರ ರಂದು ಹುಬ್ಬಳ್ಳಿಯಲ್ಲಿ ನಿಗಮ ಮಟ್ಟದ ಸಮಾವೇಶ ಹಮ್ಮಿಕೊಂಡಿದೆ.