ನ್ಯೂಡೆಲ್ಲಿ: ದೆಹಲಿಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಭಾರತ ರತ್ನ ನೀಡಬೇಕು, ಆದರೆ ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರವು ಬೇಟೆಯಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಬಕಾರಿ ತನಿಖೆಯಲ್ಲಿ ಮನೀಶ್ ಸಿಸೋಡಿಯಾ ಅರೆಸ್ಟ್ ಆಗಬಹುದು. ಯಾರಿಗೆ ಗೊತ್ತು ನಾನು ಸಹ ಅರೆಸ್ಟ್ ಆಗಬಹುದು. ಇದೆಲ್ಲವೂ ಗುಜರಾತಿನ ಚುನಾವಣೆ ಗೆಲ್ಲಲು ಬಿಜೆಪಿ ಮಾಡುತ್ತಿರುವ ತಂತ್ರಗಳು ಎಂದು ಆರೋಪಿಸಿದರು.
ಸಿಸೋಡಿಯಾ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ರೂಪಿಸಿ ಪವಾಡ ಮೆರೆದಿದ್ದಾರೆ. ಅಂತಹ ವ್ಯಕ್ತಿಗೆ ಭಾರತ ರತ್ನ ಸಿಗಬೇಕು. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಅವರ ಕೈಗೆ ಕೊಡಬೇಕು. ಬದಲಿಗೆ ಅವರ ವಿರುದ್ಧ ಸಿಬಿಐ ದಾಳಿ ನಡೆದಿದೆ. ಇದು ಬಿಜೆಪಿ ಅವರಿಗೇ ನಾಚಿಕೆ ಆಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಅವರು ಮಾಡಿದ ಎಲ್ಲ ಕೆಲಸಗಳಿಗಾಗಿ ಸಿಸೋಡಿಯಾ ಅವರು ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದರು. ಅಂತಹ ವ್ಯಕ್ತಿಗೆ ಭಾರತ ರತ್ನ ಸಿಗಬೇಕು, ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅವರ ಕೈಗೆ ಕೊಡಬೇಕು, ಬದಲಿಗೆ ಅವರ ವಿರುದ್ಧ ಸಿಬಿಐ ದಾಳಿ ನಡೆಸಿತು.
ಇತ್ತ ದೇಶದಲ್ಲಿ ಶಿಕ್ಷಣ ಕ್ರಾಂತಿಗೆ ಮುಂದಾಗುತ್ತಿರುವ ಸಿಸೋಡಿಯಾ ಅವರನ್ನು ಮೆಚ್ಚುವ ಬದಲು ಅವರನ್ನು ಗುರಿಯಾಗಿಸಲಾಗುತ್ತಿದೆ. ಶೀಘ್ರದಲ್ಲೇ ಸಿಸೋಡಿಯಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದರು.
ಗುಜರಾತ್‌ನಲ್ಲಿ ಕಳೆದ 27 ವರ್ಷಗಳ ಬಿಜೆಪಿ ಆಡಳಿತದ ದುರಹಂಕಾರದ ಭಾರವನ್ನು ಗುಜರಾತ್‌ನ ಜನರು ಅನುಭವಿಸುತ್ತಿದ್ದಾರೆ. ಗುಜರಾತ್‌ನಲ್ಲಿ ತಮ್ಮ ಆಮ್ ಆದ್ಮಿ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿನ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.
ಕೇಜ್ರಿವಾಲ್ ಜಿ ನನ್ನ ಗುರು. ಅವರು ನನ್ನ ಮಾರ್ಗದರ್ಶಕ. ನಾನು ಮುಖ್ಯಮಂತ್ರಿಯಾಗಲು ರಾಜಕೀಯಕ್ಕೆ ಬಂದಿಲ್ಲ… ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಇದು ಬಿಜೆಪಿಗೆ ನನ್ನ ತೀಕ್ಷ್ಣ ಪ್ರತಿಕ್ರಿಯೆಯಾಗಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೇಜ್ರಿವಾಲ್ ಜಿ ಕೆಲಸ ಮಾಡುವುದನ್ನು ತಡೆಯಲು ಈ ಎಲ್ಲ ವಿಷಯವನ್ನು (ಅಬಕಾರಿ ನೀತಿ ತನಿಖೆ) ಎತ್ತಲಾಗಿದೆ. ಅದರಲ್ಲೂ ಅವರು ಗುಜರಾತ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ನನಗೆ ಸಂದೇಶಗಳು ಬಂದಾಗ ನನಗೆ ಆಶ್ಚರ್ಯವಾಯಿತು.
ಇನ್ನು ಸಂದೇಶಗಳಲ್ಲಿ ನನಗೆ ಎರಡು ಆಫರ್‌ಗಳು ಬಂದಿವೆ – ನೀವು ಎಎಪಿಯನ್ನು ವಿಭಜಿಸಿದರೆ, ಎಲ್ಲ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ಕೈಬಿಡಲಾಗುವುದು. ಮತ್ತು ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಬೆನ್ನಲ್ಲೇ ಆಮ್ ಅದ್ಮಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.