ಮಾನ್ವಿ: ಬಸ್‌ನಲ್ಲಿ ಪ್ರಯಾಣಿಸುವಾಗ ಕಳೆದುಕೊಂಡಿದ್ದ ಸುಮಾರು 30 ಸಾವಿರ ರೂ. ಮೌಲ್ಯದ ಮಾಂಗಲ್ಯವನ್ನು ಮರಳಿ ವಾರಸುದಾರರಿಗೆ ತಲುಪಿಸುವ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಕೆಆರ್‌ಟಿಸಿ ರಾಯಚೂರು ವಿಭಾಗ, ಮಾನ್ವಿ ಘಟಕದ ವಾಹನ (KA36 F 1335)ದಲ್ಲಿ ಭಾನುವಾರ ಆ.27ರಂದು ರಾಯಚೂರ-ವಿಜಯಪುರ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ವಿಜಯಪುರ ನಿವಾಸಿ ನೂರ್‌ಜಹಾ ಇನಾಮ್ದಾರ್ ಎಂಬುವರು ಬಸ್‌ನಲ್ಲಿ 5 ಗ್ರಾಂನ ಮಾಂಗಲ್ಯವನ್ನು ಕಳೆದುಕೊಂಡಿದ್ದರು.
ನಾಲತವಾಡದಿಂದ ವಿಜಯಪುರಕ್ಕೆ ಪ್ರಯಾಣಿಸುವಾಗ ಈ ಮಾಂಗಲ್ಯವನ್ನು ಬಸ್‌ನಲ್ಲಿ ಕಳೆದುಕೊಂಡಿದ್ದ ನೂರ್‌ಜಹಾ ಇನಾಮ್ದಾರ್ ಅವರಿಗೆ ನಿರ್ವಾಹಕ ಶಿವಾನಂದ ಯಾಳವಾರ್ (ಬಿಲ್ಲೆ ಸಂಖ್ಯೆ: 1056) ಹಾಗೂ ಚಾಲಕ ರಾಮಪ್ಪ ಕುಂದರಗಿ (ಬಿಲ್ಲೆ ಸಂಖ್ಯೆ:9212) ಅವರು ಪ್ರಾಮಾಣಿಕತೆ ಮೆರೆದು ತಮಗೆ ಸಿಕ್ಕಿದ್ದ ಬಂಗಾರದ ಮಾಂಗಲ್ಯವನ್ನು ವಾರಸುದಾರರಿಗೆ ಮರಳಿಸಿದ್ದಾರೆ.
ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಎಟಿಎಸ್ ದೇವೇಂದ್ರ ಡಂಬಳ್ ಹಾಗೂ ವಿಜಯಪುರ ಗಾಂಧಿ ಚೌಕ್ ಪೊಲೀಸರ ಸಮ್ಮುಖದಲ್ಲಿ ಮಾಂಗಲ್ಯವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಚಾಲನಾ ಸಿಬ್ಬಂದಿಯ ಈ ಪ್ರಾಮಾಣಿಕ ನಡೆಗೆ ಎಟಿಎಸ್ ದೇವೇಂದ್ರ ಡಂಬಳ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಸಂಸ್ಥೆಯಲ್ಲಿ ಪ್ರಾಮಾಣಿಕರೆ ಹೆಚ್ಚಾಗಿ ಇದ್ದಾರೆ ಎಂಬುದಕ್ಕೆ ಇವರೆ ನಿದರ್ಶನ ಎಂದು ಶ್ಲಾಘಿಸಿದ್ದಾರೆ.
ಇನ್ನು ಸಾರಿಗೆಯ ಚಾಲನಾ ಸಿಬ್ಬಂದಿ ಪ್ರಯಾಣಿಕರು ಬಸ್‌ನಲ್ಲಿ ಕಳೆದುಕೊಂಡ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮರೆಯುತ್ತಿರುವುದನ್ನು ನಾವು ಕೇಳುತ್ತಿರುತ್ತೇವೆ. ಚಾಲನಾ ಸಿಬ್ಬಂದಿಯ ಈ ನಡೆಯಿಂದ ನಮಗೆ ಕೆಲಸದ ಒತ್ತಡವು ಕಡೆಮೆಯಾಗಿದೆ ಎಂದು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನ್ವಿ ಘಟಕದ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಗೆ ಸಂಸ್ಥೆಯ ನೌಕರರು ಮತ್ತು ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಇಂಥ ಪ್ರಾಮಾಣಿಕ ಸಿಬ್ಬಂದಿಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಬಹುಮಾನ ಘೋಷಿಸುವ ಮೂಲಕ ಇತರರಿಗೂ ಪ್ರೇರಣೆ ನೀಡಬೆಕು ಎಂದು ಒತ್ತಾಯಿಸಿದ್ದಾರೆ.