ಮೈಸೂರು: ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿ ನಂತರ ಬರ್ಬರವಾಗಿ ಹತ್ಯೆಯಾಗಿದ್ದ ಬೆಂಗಳೂರು ಮೂಲದ ಟಿಕ್ಟಾಕ್ ಸ್ಟಾರ್ ನವೀನ್ ಪ್ರಕರಣವನ್ನು ಭೇದಿಸಿರುವ ಮೈಸೂರಿನ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ಆ.27 ರಂದು ನವೀನ್, ಇಬ್ಬರು ಯುವತಿಯರ ಜತೆ ಮೈಸೂರಿಗೆ ಬಂದಿದ್ದರು. ಈ ವೇಳೆ ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದಾಗ ಆತನನ್ನು ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ರಾತ್ರಿ 9.45ರ ಸುಮಾರಿಗೆ ಅಪಹರಣ ಮಾಡಿತ್ತು.
ಬಳಿಕ ನವೀನ್ ಮೃತದೇಹ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗುರುತು ಪತ್ತೆಯಾಗಿದ್ದು, ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ: ಬೆಂಗಳೂರಿನ ಕಾರ್ಪೋರೆಟರ್ ಅಣ್ಣನ ಮಗನ ಕೊಲೆಗೆ ಪ್ರತೀಕಾರವಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲೀಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಆರೋಪಿಯಾಗಿದ್ದ. ಅಲ್ಲದೆ, ಜೈಲು ಸೇರಿದ್ದ ನವೀನ್ ಕೆಲದಿನಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಇದೀಗ ಕೊಲೆಯಾಗಿದ್ದು, ಇದೇ ಕಾರಣಕ್ಕೆ ಇರಬಹುದು ಎಂದು ಶಂಕಿಸಲಾಗಿದೆ.
ಟಿಕ್ ಟಾಕ್ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ. ನವೀನ್ ಹತ್ಯೆ ಸಂಬಂಧ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.