ಉಜ್ಜಯಿನಿ: ಬಂಧಿತ ಕರ್ನಾಟಕದ ರೈತರನ್ನು ಮಧ್ಯಪ್ರದೇಶದ ಪೊಲೀಸರು ದೆಹಲಿಗೆ ಹೋಗುವುದನ್ನು ತಡೆ ಉಜ್ಜಯಿನಿಯಿಂದ ವಿಶೇಷ ರೈಲಿನ ಮೂಲಕ ವಾರಣಾಸಿಗೆ ಕಳಿಸಿದ್ದಾರೆ.
ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿತ ಕರ್ನಾಟಕದ ರೈತರನ್ನು ಸ್ವಾಗತಿಸಿ ಉಪಚರಿಸಲು ಸ್ಥಳೀಯ ಮುಖಂಡರು ರೈತರಿಗೆ ತಿಂಡಿ ಕಾಫಿ ತಂದು ಕೊಡಲು ರೈಲು ನಿಲ್ದಾಣಕ್ಕೆ ಬಂದಾಗ ಪೊಲೀಸರು ಅವರಿಗೆ ತಡೆ ಹಾಕಿದಾಗ ವಾಗ್ವಾದ ಕೂಡ ನಡೆದಿತ್ತು. ನಾವೇ ಎಲ್ಲವನ್ನು ವ್ಯವಸ್ಥೆ ಮಾಡುತ್ತೇವೆ ಎಂದು ಸ್ಥಳೀಯ ಮುಖಂಡರಿಗೆ ಪೊಲೀಸರು ಹೇಳಿದ್ದರು.
ಹೌದು! ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಮಂಗಳವಾರದಿಂದ ಹಮ್ಮಿಕೊಂಡಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ ವರ್ಷ ಇದೇ ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆ ಹುಸಿಗೊಳಿಸಿದ ವಿರುದ್ಧ ರೈತರ ದೆಹಲಿ ಚಲೋ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮಧ್ಯಪ್ರದೇಶ ಭೋಪಾಲ್ ರೈಲು ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ಕರ್ನಾಟಕದ ರೈತರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿ, ಚೌಟ್ರಿಯೊಂದರಲ್ಲಿ ಬಂಧಿಸಿಟ್ಟಿದ್ದರು. ಆ ಬಳಿ ಮಂಗಳವಾರ ಉಜ್ಜಯಿನಿಗೆ ಕರೆದುಕೊಂಡು ಹೋಗಿದ್ದರು. ಇಂದು ಮುಂಜಾನೆ ಅಲ್ಲಿಂದ ದೆಹಲಿಗೆ ಹೋಗುವುದನ್ನು ತಡೆ ಮತ್ತೆ ಉಜ್ಜಯಿನಿಯಿಂದ ವಿಶೇಷ ರೈಲಿನ ಮೂಲಕ ವಾರಣಾಸಿಗೆ ಕಳಿಸಿದ್ದಾರೆ.
ಕೇಂದ್ರ ಸಚಿವರಾದ ಪಿಯುಷ್ ಗೋವಿಲ್, ಕೃಷಿ ಸಚಿವ ಅರ್ಜುನ್ ಮುಂಡ ಸೋಮವಾರ ಪಂಜಾಬ್‌ನ ಚಂಡಿಗಡದಲ್ಲಿ ಸಂಜೆ 6 ಗಂಟೆಯಿಂದ 11 ಗಂಟೆ ತನಕ ಸಭೆ ನಡೆಸಿದರೂ ಯಾವುದೇ ಸಫಲತೆ ಕಂಡಿಲ್ಲ. ಹಿಂದಿನ ವರ್ಷ ದೆಹಲಿ ಹೋರಾಟದಲ್ಲಿ ಮಡಿದ ರೈತರು ಮಾಡಿದ ರೈತ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಿದ್ದೇವೆ ಈ ಹೋರಾಟದಲ್ಲಿ ದಾಖಲಾಗಿದ್ದ 3365 ಪೊಲೀಸ್ ಮೊಕದ್ದಮೆ ವಾಪಸ್ ಪಡೆದಿದ್ದೇವೆ ಎಂದು ಸಚಿವ ಪಿಯುಷ್ ಗೂಯಲ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆ ಆರಂಭದಲ್ಲಿಯೇ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲಾ, ಕರ್ನಾಟಕದಿಂದ ಬರುತ್ತಿರುವ ರೈತರನ್ನು ಅಮಾನುಷವಾಗಿ ರೌಡಿಗಳ ರೀತಿಯಲ್ಲಿ ಬಂಧಿಸಿರುವ ಪೊಲೀಸರ ಕ್ರಮ ಹಾಗೂ ರೈತ ಮುಖಂಡರ ಕುರುಬೂರ್ ಶಾಂತಕುಮಾರ್ ಪತ್ನಿ ತಲೆಗೆ ಪೆಟ್ಟು ಬೀಳಲು ಪೊಲೀಸರೇ ಕಾರಣರಾಗಿದ್ದಾರೆ. ಈ ಬಗ್ಗೆ ನಿಮ್ಮ ಸರ್ಕಾರದ ನಡವಳಿಕೆ ಸರಿಯಲ್ಲ. ತಾವು ಉತ್ತರಿಸಬೇಕು ಎಂದರು. ಆಗ ಸಚಿವ ಗೋಯಲ್ ಮುಂಜಾಗ್ರತ ಕ್ರಮವಾಗಿ ರೈತರನ್ನು ವಶಕೆ ಪಡೆದಿದ್ದೇವೆ, ಘಟನೆ ಬಗ್ಗೆ ವಿಷದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.
ಸಯುಕ್ತ ಕಿಸಾನ್ ಮೂರ್ಚಾ (ರಾಜಕೀಯತರ) ಸಂಘಟನೆಯ ರೈತ ಮುಖಂಡರಾದ ಜಗಜಿತ್ ಸಿಂಗ್ ದಲೆವಾಲ, ಶಿವಕುಮಾರ್ ಕಕ್ಕ, ಅಭಿಮನ್ಯು ಕೂಹರ, ಕುರುಬೂರು ಶಾಂತಕುಮಾರ್, ಹರಪಾಲಬಿಲಾರಿ, ಕೆ.ವಿ.ಬಿಜು, ಪಾಂಡ್ಯ, ಸುಖಂದರ್ ಕೌರ, ಜರ್ನಲ್ ಸಿಂಗ್, ಕೇಂದ್ರ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ, ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಸುದೀರ್ಘ 5 ಗಂಟೆಗಳ ಚರ್ಚೆ ನಡೆದರೂ ಸರ್ಕಾರ ಸ್ಪಷ್ಟವಾದ ನಿರ್ಧಾರವನ್ನು ತಿಳಿಸಲಿಲ್ಲ. ಹೀಗಾಗಿ ನಾವು ಮೂರು ತಿಂಗಳಿಂದಲೇ ಚಳವಳಿ ಬಗ್ಗೆ ಘೋಷಣೆ ಮಾಡಿದ್ದೇವೆ ಸರ್ಕಾರ ಅಂತಿಮ ಕ್ಷಣದಲ್ಲಿ ಸಭೆ ಕರೆದಿದೆ. ಆದರೆ ಯಾವುದೇ ನಿರ್ಧಾರ ಹೇಳುತ್ತಿಲ್ಲ, ಆದ್ದರಿಂದ ನಾವು ಚಳವಳಿಯನ್ನು ನಿಲ್ಲಿಸುವುದಿಲ್ಲ ಎಂದು ಘೋಷಣೆ ಮಾಡಿ ಸಭೆಯಿಂದ ರೈತ ಮುಖಂಡರು ಹೊರ ನಡೆದರು.