NEWSನಮ್ಮರಾಜ್ಯಮೈಸೂರುಲೇಖನಗಳುಸಂಸ್ಕೃತಿ

ವಿಶ್ವವಿಖ್ಯಾತ ಮೈಸೂರು ದಸರಾ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ-ಕರ್ನಾಟಕದ ಹೆಮ್ಮೆ!

ವಿಜಯಪಥ ಸಮಗ್ರ ಸುದ್ದಿ

ಮೈಸೂರು ಮಲ್ಲಿಗೆ, ಅರಮನೆಗಳ ನಗರಿ, ಪಾರಂಪರಿಕ ಕಟ್ಟಡಗಳುಳ್ಳ ಸಾಂಸ್ಕೃತಿಕ ನಗರಿ ಎಂಬಿತ್ಯಾದಿಯಾಗಿ ವರ್ಣನೆಗೆ ನಿಲುಕಿ ವಿಶ್ವದಲ್ಲೇ ಚಿರ ಪರಿಚಿತವಾಗಿರುವ ಮೈಸೂರು ಈಗ ಪ್ರವಾಸಿಗರ ಕೇಂದ್ರ ಬಿಂದು.

ರಾಜರ ಆಳ್ವಿಕೆ ಕಾಲದಲ್ಲಿ ಪ್ರಾರಂಭವಾದ ನಾಡಹಬ್ಬ ನವರಾತ್ರಿ ಉತ್ಸವ ಎಂದು ಬಿಂಬಿತವಾದ ವಿಶ್ವವಿಖ್ಯಾತ ಮೈಸೂರು ದಸರಾ ಇಂದಿಗೂ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ ಮತ್ತು ಕರ್ನಾಟಕದ ವೈಭವವನ್ನು ಪ್ರಪಂಚದಾದ್ಯಂತ ಪಸರಿಸಲು ಸಾಕ್ಷಿಕರಿಸಿದಂತೆ.

ನಾಡ ಹಬ್ಬದ ಪ್ರಯುಕ್ತ ಮೈಸೂರು ನಗರವು ವಿದ್ಯುತ್ ಅಲಂಕಾರದಿಂದ ಶೃಂಗಾರಗೊಳ್ಳುವ ಸಿದ್ಧತೆ ಭರದಿಂದ ಸಾಗುತ್ತಿದೆ. ಪ್ರಮುಖವಾಗಿ ಮೈಸೂರು ಅರಮನೆ, ಕಲಾಮಂದಿರ ಭೂಮಿಗೀತ, ರಂಗಮಂದಿರ, ನಟನ ಮಂಟಪ, ದೇವರಾಜ ವಿವಿಧೋದ್ದೇಶ ಕ್ರೀಡಾಂಗಣ ಚಾಮುಡಿವಿಹಾರ ಕ್ರೀಡಾಂಗಣ, ವಸ್ತು ಪ್ರದರ್ಶನ ಅವರಣ, ಕರ್ಜನ್ ಪಾರ್ಕ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮಕ್ಕಳಿಂದ ವೃದ್ಧರವರೆವಿಗೂ ಲಿಂಗಬೇಧವಿಲ್ಲದೆ ಎಲ್ಲರೂ ಪಾಲ್ಗೊಂಡು, ಸಂಗೀತ, ಕ್ರೀಡೆ, ಫಲಪುಷ್ಪ ವೀಕ್ಷಣೆ, ಕುಸ್ತಿಯನ್ನು ನೋಡುವುದರ ಜೊತೆಗೆ ಅರಮನೆಯಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಮೋಹಕ ಚಿತ್ತಾರದ ಬೆಳಕನ್ನು ಸವಿಯುವುದರಲ್ಲಿ ತಲ್ಲಿನರಾಗುವುದಕ್ಕೆ ದಿನಗಣನೆ ಶುರುವಾಗಿದೆ.

ಇನ್ನು ಈ ಎಲ್ಲವನ್ನು ನೋಡುವವರಿಗೆ ಸಮಯ ಜಾರುವುದೆ ಮರೆತು ಹೋಗುತ್ತದೆ. ಅಷ್ಟರ ಮಟ್ಟಿಗೆ ನಾಡಹಬ್ಬ ಜನ-ಮನ ಸೂರೆಗೊಂಡಿದೆ. ಗ್ರಾಮೀಣ ಸೊಗಡಿನ ಜಾನಪದ ಗೀತೆಗಳು ಮೇಲೈಸುವಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚಲನ ಚಿತ್ರಗೀತೆಗಳು, ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿ- ತಿನಿಸುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತ ರಂಜಿಸಲಿವೆ.

ಅದರಲ್ಲೂ ಚಲನ ಚಿತ್ರಗೀತೆಗಳನ್ನು ಹಾಡುವುದಕೋಸ್ಕರವೇ ‘ಯುವ ದಸರಾ’ ಎಂಬ ನಾಮಾಂಕಿತದೊಂದಿಗೆ ತೆರೆಯಲಿರುವ ಈ ಕಾರ್ಯಕ್ರಮ ಯುವ ಹೆಂಗಳೆಯರ ಹೃದಯಗಳಲ್ಲಿ ನವ ಸಿಂಚನದ ಛಾಪು ಮೂಡಿಸಿ ಪ್ರೇಮಲೋಕಕ್ಕೆ ಕರೆದೊಯ್ದರೆ, ಕಲಾ ಮಂದಿರದಲ್ಲಿ ವಿವಿಧ ಜಾನಪದ ತಂಡಗಳಿಂದ ಮೈನವಿರೇಳಿಸುವ ವಿಶಿಷ್ಟ ಕಲೆಗಳ ಪ್ರದರ್ಶನ ಜರುಗುತ್ತವೆ.

ವಸ್ತು ಪ್ರದರ್ಶನ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಾಲಭವನ ಬನ್ನಿ ಮಂಟಪದಲ್ಲಿ ಚಲನಚಿತ್ರ ರಂಗದ ಮಹಾನ್ ವ್ಯಕ್ತಿಗಳ ಚಿತ್ರಪ್ರದರ್ಶನ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕವಿ ಕಾವ್ಯ ಪರಂಪರೆ, ಕಾಡಾ ಕಚೇರಿ ಆವರಣದಲ್ಲಿ ಆಹಾರ ಮೇಳ, ಭೂಮಿಗೀತ, ರಂಗಮಂದಿರದಲ್ಲಿ ನಾಟಕಗಳು, ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಗನ್ನೋಹನ ಅರಮನೆಯಲ್ಲಿ ರಂಗಗೀತೆಗಳು, ಪುರಭವನ, ನಟನ ರಂಗಮಂಟಪ ಹೀಗೆ ನಗರದ ಎಲ್ಲ ಪ್ರಮುಖ ಮಂದಿರಗಳು, ದೇವಾಲಯಗಳಲ್ಲೂ ನವ ರಾತ್ರಿಯ ಉತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತವೆ.

ನವ ರಾತ್ರಿಗಳು ಸಂಗೀತ ರಸದೌತಣದೊಂದಿಗೆ ಜಾರಿ ದಶ(ಹತ್ತನೆ) ದಿನದಂದು ಅಭಿಮನ್ಯು ಮೇಲೆ 750ಕೆಜಿಯ ಚಿನ್ನದ ಅಂಬಾರಿಯನ್ನಿಟ್ಟು ಅಂಬಾರಿಯಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಪ್ರತಿಮೆಯನ್ನಿಟ್ಟು ಅರಮನೆಯಿಂದ ಬನ್ನಿ ಮಂಟಪದ ವರೆವಿಗೂ ಅಭಿಮನ್ಯು ಗಂಭೀರವಾಗಿ ನಯನ ಮನೋಹರವಾದ ಅಡಿಯಿಡುತ್ತ ಸಾಗುತ್ತಿದ್ದರೆ ಪ್ರೇಕ್ಷಕರ ಮನಸ್ಸು ಕೆಲಕ್ಷಣ ‘ನಾನು ಅಂಬಾರಿಯ ಮೇಲೆ ಕುಳಿತು ಹೊರಟ್ಟಿದ್ದೇನೆ ಎಂಬಂತಹ ಕಲ್ಪನಾ ಲೋಕದಲ್ಲಿ ತೇಲಿ ಮಿಂಚಿನಂತೆ ಮಾಯವಾಗದಿರದು.

ಅಭಿಮನ್ಯು ಗಾಂಭೀರದ ನಡಿಗೆಯಲ್ಲಿ ಚಿನ್ನದ ಅಂಬಾರಿಯನ್ನು ತನ್ನ ಬೆನ್ನ ಮೇಲೆ ಹೊತ್ತು ಬರುತ್ತಿರುವುದನ್ನು ವೀಕ್ಷಿಸಲೆಂದೇ ಸಾವಿರಾರು ಮೈಲಿಗಳಿಂದ ದೇಶ- ವಿದೇಶಿಗರು ಆಗಮಿಸುತ್ತಾರೆ. ಅಷ್ಟೆಯಲ್ಲ ನಮ್ಮ ನಾಡಿನಲ್ಲಿ ಜರುಗುವ ಈ ದಸರಾ ಉತ್ಸವವನ್ನು ತಮ್ಮ ತಾಯ್ನಾಡಿನ ಪತ್ರಿಕೆಗಳಲ್ಲಿ ತಮ್ಮದೇ ಶೈಲಿಯಲ್ಲಿ ಬರೆದು ಹಾಡಿ ಹೊಗಳುವುದು ಮೈಸೂರು ದಸರಾದ ಸಂಭ್ರಮಾಚರಣೆಗೆ ಹಿಡಿದ ಕನ್ನಡಿ.

ಪ್ರವಾಸಿಗರ ಬರವಣಿಗೆಯಿಂದ ಪುಳಕಿತರಾಗಿ ಆಕರ್ಷಿತರಾದ ವಿದೇಶಿಯರು ಒಮ್ಮೆಯಾದರು ಮೈಸೂರು ದಸರಾ ನೋಡಬೇಕೆಂಬ ಆಶಯ ವ್ಯಕ್ತಪಡಿಸದೆ ಇರರು. – ದೇವರಾಜು ಬೀಡನಹಳ್ಳಿ

Megha
the authorMegha

Leave a Reply

error: Content is protected !!