ವಿಜಯಪಥ ವಿಶೇಷ
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶಕ್ಕೆ ಕೊರೊನಾತಂಕ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ತೋಟಗಾರಿಕಾ ಇಲಾಖೆ ರದ್ದುಪಡಿಸಿದೆ.
ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ವರ್ಷ ಸಣ್ಣ ಪ್ರಮಾಣದಲ್ಲಿ ಕೊರೊನಾ ಜಾಗೃತಿ ನೀಡುವ ಕುರಿತ ಫಲಪುಷ್ಪ ಪ್ರದರ್ಶನ ನಡೆಸಬೇಕು ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಸಣ್ಣ ಪ್ರಮಾಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಿದರೆ ಜನ ಜನರುವುದಿಲ್ಲ. ಇದರಿಂದ ಆರ್ಥಿಕ ಹೊರೆಯಾಗಲಿದೆ ಎಂಬ ಲೆಕ್ಕಾಚಾರಕ್ಕೆ ಬಂದ ಇಲಾಖೆ ಪ್ರದರ್ಶನವನ್ನು ರದ್ದುಪಡಿಸಿದೆ.
ಈ ನಡುವೆ ರೂಪಾಂತರಿ ಕೊರೊನಾ ಭೀತಿ ಜನರಲ್ಲಿ ಕಾಡುತ್ತಿದ್ದು, ಫಲಪುಷ್ಪ ಪ್ರದರ್ಶನ ಈ ಬಾರಿ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಮೈಸೂರು ಉದ್ಯಾನ ಕಲಾಸಂಘ ಕೂಡ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ಬೇಡ ಎಂದು ಹಿಂದೆಯೇ ಹೇಳಿತ್ತು. ಹೀಗಾಗಿ ತೋಟಗಾರಿಕೆ ಸಚಿವ ನಾರಾಯಣಗೌಡ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮದಲ್ಲಿ ಅಂದರೆ ಆಗಸ್ಟ್‌ನಲ್ಲಿ ನಡೆಸಬೇಕಿದ್ದ ಪ್ರದರ್ಶನವನ್ನೂ ರದ್ದುಮಾಡಲಾಗಿತ್ತು. ಇನ್ನು ಅದು ಅಲ್ಲದೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶಕ್ಕೆ ಎರಡು ಮೂರು ತಿಂಗಳ ಮೊದಲೇ ಪೂರ್ವ ಸಿದ್ಧತೆಗಳು ನಡೆಯಬೇಕಿತ್ತು. ಈವರೆಗೂ ಯಾವುದೇ ಸಿದ್ಧತೆಗಳು ನಡೆಯದೆ ಇರುವುದರಿಂದಲ್ಲೂ ಈ ಬಾರಿ ಕೈ ಬಿಡಲಾಗಿದೆ.
ಇನ್ನು ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶಕ್ಕೆ ಬಹುಮುಖ್ಯವಾಗಿ ಬೇಕಿರುವ ಹಣವೂ ಇಲ್ಲ, ಸರಳವಾಗಿ ಮಾಡಿದರೆ ಜನ ಕೂಡ ಬರುವುದು ಅನುಮಾನ ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ತಿಳಿಸಿ ರದ್ದುಗೊಳಿಸುವಂತೆ ಮನವಿ ಮಾಡಲಾಗಿತ್ತು.
ಪ್ರತಿವರ್ಷ ಆಗಸ್ಟ್ ಮತ್ತು ಜನವರಿಯಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಕೊರೊನಾ ಮಹಾಮಾರಿಯಿಂದ ನಿಂತುಹೋಗಿರುವುದು ಫಲಪುಷ್ಪ ಪ್ರದರ್ಶನ ಅಭಿಮಾನಗಳಲ್ಲಿ ನಿರಾಸೆಯುಂಟು ಮಾಡಿದೆ. ಜತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಕೆಲವರು ಇದು ನಿಂತು ಹೋಗಿರುವುದು ಒಳ್ಳೆಯೆದೇ ಆಯಿತು ಎಂದುಕೊಳ್ಳುತ್ತಿದ್ದಾರೆ.
ಆದರೆ, ಯುವ ಪ್ರೇಮಿಗಳಿಗೆ ಮುದ ನೀಡುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ಇಲ್ಲದಿರುವುದು ತುಸು ಬೇಸರವನ್ನು ತರಿಸಿದೆ. ಅಲ್ಲದೇ ಲಾಲ್‌ಬಾಗ್‌ನಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸ್ನೇಹಿತರಿಗೆ ವಾಟ್ಸ್ ಆಪ್ ಅಥವಾ ಇತರ ಜಾಲತಾಣಗಳ ಮೂಲಕ ತಮ್ಮ ಸವೆ ನೆನಪನ್ನು ಹಂಚಿಕೊಳ್ಳುವ ಅವಕಾಶವು ತಪ್ಪಿತಲ್ಲ ಎಂದು ಮರುಗುತ್ತಿರುವವರ ಸಂಖ್ಯೆಯೂ ರಾಜಧಾನಿಯಲ್ಲಿ ಕಡಿಮೆಯೇನು ಇಲ್ಲ. ಆದೇನೆ ಇದ್ದರೂ ಕೊರೊನಾ ಮಹಾಮಾರಿಯಿಂದ ಮೊದಲು ಮುಕ್ತಗೊಂಡು ನಂತರ ಇಂಥ ಪ್ರದರ್ಶನವನ್ನು ಆಯೋಜಿಸಲಿ ಬಿಡಿ ಎನ್ನುವವರೂ ಕೂಡ ಇದ್ದಾರೆ.