ಅಘನಾಶಿನಿ-ಬೇಡ್ತಿ ನದಿ ತಿರುವಿಗೆ ವಿರೋಧಿಸಿ ಶಿರಸಿಯಲ್ಲಿ ಜನ ಸಮಾವೇಶ ಸಾವಿರಾರು ಮಂದಿ ಭಾಗಿ: ಸರ್ಕಾರದ ವಿರುದ್ಧ ಆಕ್ರೋಶ

ಉಕ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ-ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದ್ದು, ಈ ಯೋಜನೆಗಳು ಇಡೀ ಜಿಲ್ಲೆಗೆ ಮಾರಕವಾಗುತ್ತವೆ ಎಂದು ಜಿಲ್ಲೆಯ ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಂದು ಶಿರಸಿಯಲ್ಲಿ ಜನ ಸಮಾವೇಶ ಮೂಲಕ ಸಾವಿರಾರು ಮಂದಿ ಸೇರಿ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದೆ. ಅಘನಾಶಿನಿ ನದಿ ತಿರುವು ಮಾಡಿ ಚಿತ್ರದುರ್ಗದ ವೇದಾವತಿ ನದಿಗೆ ಜೋಡಣೆ ಮಾಡಲು ಹೊರಟರೆ, ಬೇಡ್ತಿ ನದಿ ತಿರುವು ಮಾಡಿ ವರದಾ ನದಿಗೆ ಜೋಡಣೆ ಮಾಡಲು ಹೊರಟಿದೆ. ಈ ಯೋಜನೆ ಜಾರಿಯಾದರೆ ಸಾವಿರಾರು ಎಕರೆ ಅರಣ್ಯ ಸಂಪತ್ತಿಗೆ ಹಾನಿಯಾಗುವುದರ ಜತೆಗೆ ಕೃಷಿಗೆ ದೊಡ್ಡ ಹಾನಿಯಾಗಲಿದ್ದು ಹಲವರು ನಿರಾಶ್ರಿತರಾಗಲಿರುವ ಹಿನ್ನೆಲೆಯಲ್ಲಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.
ಇವತ್ತು ಈ ಯೋಜನೆ ವಿರೋಧಿಸಿ ಜಿಲ್ಲೆಯ ಸಾವಿರಾರು ಜನರು ಒಂದೆಡೆ ಸೇರಿ ಜನ ಸಮಾವೇಶದ ಮೂಲಕ ವಿರೋಧಿಸಿದರು. ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಯಿತು.
ಸಮಾವೇಶದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲದೇ ವಿವಿಧ ಮಠಗಳ ಮಠಾಧೀಶರು ಹೋರಾಟಕ್ಕೆ ಬೆಂಬಲ ನೀಡಿದರು. ಸಮಾವೇಶದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ಸಹ ಮಾಡಲಾಯಿತು. ಈ ಯೋಜನೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಬಜೆಟ್‌ನಲ್ಲಿ ಮಂಡನೆ ಮಾಡಿದ್ದು ಆಗ ಈಗಿನ ಸಂಸದರು ಕಾಗೇರಿ ಅವರು ಸ್ಪೀಕರ್ ಆಗಿದ್ದರು ವಿರೋಧಿಸಿಲ್ಲ ಎಂದು ಸಚಿವ ಮಂಕಾಳ ವೈದ್ಯ ಆರೋಪ ಮಾಡಿದರು.
ಹೊರಗೆ ಹೋಗಿ ಬೇರೆ ಮಾತನಾಡೋಡನ್ನ ಬಿಡಬೇಕು: ನದಿಗಳನ್ನು ದೇವರು ಸೃಷ್ಟಿ ಮಾಡಿದೆ. ಆದರೆ ಅದಕ್ಕೆ ವಿರೋಧವಾಗಿ ನದಿ ತಿರುವು ಮಾಡಲು ಹೊರಟಿದ್ದಾರೆ. ಅದಕ್ಕೆ ಒಮ್ಮತದಿಂದ ನಾವು ವಿರೋಧಿಸುತ್ತಿದ್ದೇವೆ. ಜಿಲ್ಲೆಯ ಜನರಿಗೆ ಸಮಸ್ಯೆ ಆಗಿದ್ದರೆ, ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಯಡಿಯೂರಪ್ಪ ಸಿಎಂ ಇದ್ದಾಗ ಈ ಯೋಜನೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್‌ನಲ್ಲಿ ಘೋಷಣೆಯಾದಾಗ ಯಾರೂ ಮಾತನಾಡಲಿಲ್ಲ. ಆಗ ಸ್ಪೀಕರ್ ಆಗಿ ಸಂಸದ ಕಾಗೇರಿ ಅವರೇ ಇದ್ದರು.
ಅಂದೇ ಈ ವಿಷಯ ಅಲ್ಲಿಗೆ ನಿಂತಿದ್ದರೆ ಇಂದು ಹೋರಾಟ ಮಾಡುವ ಸ್ಥಿತಿ ಬರುತ್ತಿರಲಿಲ್ಲ. ಕೇಂದ್ರದಿಂದ ಈ ಯೋಜನೆಗೆ ಶೇಕಡಾ 90 ರಷ್ಟು ಅನುದಾನ ಕೊಡಬೇಕು, ರಾಜ್ಯ ಸರ್ಕಾರ ಶೇ.10ರಷ್ಟು ಹಣ ಕೊಡಬೇಕು. ಈ ಎಲ್ಲ ಹಣ ನಿಮ್ಮ ತೆರಿಗೆಯ ಹಣವೇ ಆಗಿದೆ. ನಿಮ್ಮ ಹಣದಿಂದ ನಿಮಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ನಾವು ವೇದಿಕೆಯಲ್ಲಿ ಮಾತನಾಡಿದ ರೀತಿಯಲ್ಲಿ ನಡೆದುಕೊಳ್ಳಬೇಕು. ಹೊರಗೆ ಹೋಗಿ ಬೇರೆ ಮಾತನಾಡೋಡನ್ನು ಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಸ್ವಾಮೀಜಿ ಅವರಿಗೆ ಗೌರವ ಕೊಟ್ಟು ಮಾತನಾಡುತ್ತೇನೆ ನಾನು ವೇದಿಕೆಯಲ್ಲಿ ಏನು ಮಾತನಾಡಬೇಕು ಅನ್ನುವುದು ತಿಳಿದಿದೆ. ಸ್ವಾಮೀಜಿ ಅವರಿಗೆ ಗೌರವ ಕೊಟ್ಟು ಮಾತನಾಡುತ್ತೇನೆ. ನಾನು ಹಿಂದೆಯೂ, ಈಗಲೂ ಪರಿಸರ ರಕ್ಷಣೆ ವಿಚಾರದಲ್ಲಿ ನಿಮ್ಮೊಂದಿಗೆ ಇದ್ದೇನೆ. ನೀರು ಬೆಂಕಿ ಆರಿಸಲು ಬಳಸುವುದು, ಆದರೆ ನೀರು ಹೇಗೆ ಬೆಂಕಿ ಹಚ್ಚುತ್ತದೆ ಎನ್ನುವುದು ಎಲ್ಲರಿಗೆ ತಿಳಿದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇನ್ನು ಹಿರಿಯರ ಪರಿಶ್ರಮದಿಂದ ಪಶ್ಚಿಮ ಘಟ್ಟ ನಮಗೆ ಸಿಕ್ಕಿದೆ. ಶುದ್ದ ಗಾಳಿ, ನೀರು ನಮಗೆ ಸಿಕ್ಕಿದೆ. ಮುಂದಿನ ಪೀಳಿಗೆಗೆ ನಾವು ಇದನ್ನು ನೀಡಬೇಕು. ಅದಕ್ಕಾಗಿ ಈ ಯೋಜನೆಗೆ ವಿರೋಧಿಸಬೇಕು. ಈ ಯೋಜನೆ ವಿರುದ್ಧ ಹೋರಾಟ ಹಿಂದಿನಿಂದಲೂ ನಡೆಯುತ್ತಿದೆ. ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಸಚಿವ ಮಂಕಾಳ ವೈದ್ಯ ಕ್ಷೇತ್ರದಲ್ಲಿಯೇ ತರಲಾಗುತ್ತಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಯೋಜನೆಯಿಂದ ಆಗುವ ಅಪಾಯದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ಅಲ್ಲದೇ ಜಿಲ್ಲೆಯಲ್ಲಿ ಈ ಯೋಜನೆ ವಿರುದ್ದ ಯಾವುದೇ ರಾಜಕೀಯ ಬೆರಸದೇ ಒಕ್ಕೊರಲಿನ ಹೋರಾಟ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು. ಒಟ್ಟಿನಲ್ಲಿ ಪಶ್ಚಿಮ ಘಟ್ಟದ ಜೀವನದಿ ಬೇಡ್ತಿ, ಅಘನಾಶಿನಿ ನದಿ ವಿರೋಧಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಹೋರಾಟ ಪ್ರಾರಂಭವಾಗಿದ್ದು ಸರ್ಕಾರ ಈ ಬಗ್ಗೆ ಯಾವ ನಿಲುವು ತೋರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Related









