ಬೆಂಗಳೂರು ಗ್ರಾಮಾಂತರ: ನಿರಂತರ ಮಳೆಯಿಂದ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ರೈತರು ಗಮನಿಸಬೇಕಾದ ಅಂಶಗಳ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಮೊದಲನೆಯದಾಗಿ ಯಾವುದೇ ಬೆಳೆಯ ತೋಟದಲ್ಲಿ ನೀರು ನಿಂತಿದ್ದರೆ, ಆದಷ್ಟು ಬೇಗನೆ ನೀರನ್ನು ಹೊರಹಾಕುವುದು. ಯಾವುದೇ ಗೊಬ್ಬರಗಳನ್ನು, ಭೂಮಿಯ ತೇವಾಂಶ ಒಣಗುವ ತನಕ ನೀರಾವರಿ ಅಥವಾ ರಸಾವರಿ ಮೂಲಕ ಕೊಡಬಾರದು. ಬೆಳೆಯು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ, 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ, ನಂತೆ ಬೆರೆಸಿ ಸಿಂಪಡಿಸಿ.
ಹೂವು ಬಿಡುವ ಹಂತದ ಬೆಳೆಯಾದರೆ, ಕ್ಯಾಲ್ಸಿಯಂ ಮತ್ತು ಬೋರಾನ್ ಪೋಷಕಾಂಶಗಳನ್ನು ಒಳಗೊಂಡಂತೆ ರಸಗೊಬ್ಬರವನ್ನು ಸಿಂಪರಣೆ ಮಾಡುವುದು. ಬೆಳೆಯು ಕಟಾವಿನ ಹಂತದಲ್ಲಿ ಇದ್ದರೆ, ಪೋಟ್ಯಾಷಿಯಂ ನೈಟ್ರೆಟ್ ಅನ್ನು ಸಿಂಪರಣೆ ಮಾಡುವುದು. ಸಿಂಪರಣೆ ಮಾಡುವುದರಿಂದ ಮಳೆಯಿಂದಾದ ಪೋಷಕಾಂಶಗಳ ಕೊರತೆಯನ್ನು ನೀಗಿಸುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ಲಾಸ್ಟಿಕ್ ಹೊದಿಕೆಯನ್ನು ಬಳಸದೇ ಇರುವ ಬೆಳೆಗಳಲ್ಲಿ ಮಣ್ಣನ್ನು ಹೇರಿಸಿ ಇದರಿಂದ ಬೆಳೆಗಳಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಟೊಮ್ಯಾಟೋ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇರಬೇಕು. ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೊದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗಗಳ ಹಾವಳಿಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ಯಾವುದೇ ಬೆಳೆಯಾದರೂ, ಲಘುಪೋಷಕಾಂಶಗಳ ಮಿಶ‍್ರಣವನ್ನು 2-3 ಬಾರಿ ಸಿಂಪರಣೆ ಮಾಡಿದಾಗ ಮಾತ್ರ ಗಿಡದ ಬೆಳವಣಿಗೆಯನ್ನು ಸುಧಾರಿಸಲು ಸಾಧ್ಯ. ಹ್ಯೂಮಿಕ್ ಆಮ್ಲವನ್ನು ಪ್ರತಿ ಲೀಟರ್ ನೀರಿಗೆ 2ಮಿ.ಲಿ ಬೆರೆಸಿ ಸಿಂಪಡಿಸುವುದರಿಂದ ತೇವಾಂಶದಲ್ಲೂ ಬೇರಿನ ಚಟುವಟಿಕೆಗೆ ಸಹಾಯವಾಗುತ್ತದೆ.
ಕಳೆ ನಾಶಕಗಳನ್ನು ಸಿಂಪರಣೆ ಮಾಡುವಾಗ, ಹೆಚ್ಚಿನ ಮುತುವರ್ಜಿಯನ್ನು ತೆಗೆದುಕೊಳ್ಳಬೇಕು. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬೆಳೆಗಳನ್ನು ಬಾಧಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.