ಮಾನ್ಯರೇ: 2024ರ ಸಾಲಿನ 78ನೇ ಸ್ವಾತಂತ್ರ್ಯ ದಿನಾಚರಣೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಿಬ್ಬಂದಿಗಳಿಗೆ “ಕರಾಳ ದಿನ” ಎಂದರೆ ತಪ್ಪಾಗಲಾರದು ಎಂದು ನೊಂದ ಸಾರಿಗೆ ನೌಕರ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಈ ಸಾರಿಗೆ ನೌಕರನ ಮಿಡಿತವೇನು ಎಂಬುದನ್ನು ಅವರ ಬರವಣಿಗೆಯ ಮೂಲಕ ಹೇಳುವುದಾದರೆ… ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ, ವೀರ ಮರಣ ಹೊಂದಿದ. ತಮ್ಮ ತನು, ಮನ, ಧನಗಳನ್ನು ಅರ್ಪಿಸಿದ ಸಮಸ್ತ ದೇಶ ಬಾಂಧವರಿಗೆ ಸ್ವಾತಂತ್ರ್ಯೋತ್ಸವದ ಈ ಶುಭದಿನದ ಸಂದರ್ಭಕ್ಕೆ ಸಾಷ್ಟಾಂಗ ನಮಸ್ಕಾರಗಳು.
ಇಂದು ದೇಶದ ನಾಗರಿಕರು ಸಡಗರ, ಸಂಭ್ರಮ ಮತ್ತು ಅದ್ದೂರಿ, ಆಡಂಬರಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಕಾರಣೀಭೂತರಾದ ಹೋರಾಟಗಾರರಿಗೆ ಕೋಟಿ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತಾ ಬ್ರಿಟಿಷರ ಆಳ್ವಿಕೆಯಿಂದ ಪ್ರಜಾಪ್ರಭುತ್ವದ ನೆಪದಲ್ಲಿ ಆಳ್ವಿಕೆ ನಡೆಸಿದ ಈ ದೇಶದ ರಾಜಕೀಯ ಪಕ್ಷಗಳು ದೇಶದ ನಾಗರಿಕರನ್ನು ಶೋಷಿಸುತ್ತಾ, ದೇಶದ ನಾಗರಿಕರ ಸುಲಿಗೆಯಲ್ಲಿ ತೊಡಗಿರುವುದು ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿ.
ಸರ್ಕಾರದ ಖಜಾನೆಗೆ ತುಂಬಿಸಿಕೊಳ್ಳುತ್ತಾ..! ಕರ್ನಾಟಕ ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ವಂಚಿಸುತ್ತಾ, ಸಾರಿಗೆ ಸಿಬ್ಬಂದಿಗಳ ವೇತನದಿಂದ ನೂರಾರು ಕೋಟಿ ರೂಪಾಯಿಗಳನ್ನು ಸರ್ಕಾರದ ಖಜಾನೆಗೆ ತುಂಬಿಸಿಕೊಳ್ಳುತ್ತಾ, ಕಾಲ ಕಾಲಕ್ಕೆ ನೀಡಬೇಕಾದ ವೇತನ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರೂಪಾಯಿಗಳನ್ನು ಎಲ್ಲ ಸಾರಿಗೆ ಸಿಬ್ಬಂದಿಗಳಿಂದ ಕಬಳಿಸಿವೆ.
ರಾಜ್ಯದಲ್ಲಿ ಸಾರಿಗೆ ಸಂಸ್ಥೆ ಉದಯವಾದ ದಿನದಿಂದ ಈವರೆಗೆ ಸಾವಿರಾರು ಸಿಬ್ಬಂದಿಗಳ ಬಲಿದಾನ, ಶ್ರಮದಿಂದ ಸಾರಿಗೆ ಸಂಸ್ಥೆ ಹೆಮ್ಮರವಾಗಿ ಬೆಳೆದು ಇಂದು ಪ್ರತಿನಿತ್ಯ ರಾಜ್ಯಾದ್ಯಂತ ಕೋಟ್ಯಂತರ ಪ್ರಯಾಣಿಕರಿಗೆ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ನಿಷ್ಕಲ್ಮಶ ಸೇವೆಯನ್ನು ಒದಗಿಸಲಾಗುತ್ತಿದೆ. ಏಷ್ಯಾ ಖಂಡದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಗುರುತಿಸಿಕೊಂಡು ನೂರಾರು ಪ್ರಶಸ್ತಿಗಳನ್ನು ಪಡೆಯಲು ಕಾರಣೀಭೂತರಾಗಿದ್ದಾರೆ ಸಾರಿಗೆ ಸಿಬ್ಬಂದಿ. ಆದರೆ ರಾಜ್ಯವನ್ನಾಳಿದ ರಾಜಕೀಯ ಪಕ್ಷಗಳು ಸಾರಿಗೆ ಸಿಬ್ಬಂದಿಗಳಿಗೆ ನೀಡಿದ್ದೇನು?
1. ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಮುಷ್ಕರ ನಡೆಸಿದ ಸಾವಿರಾರು ಸಿಬ್ಬಂದಿಗಳನ್ನು ವಜಾ, ಅಮಾನತು, ವರ್ಗಾವಣೆ, ವೇತನ ಬಡ್ತಿ ಕಡಿತ/ಮುಂದೂಡಿಕೆ ಇತ್ಯಾದಿಗಳ ಮೂಲಕ ಶೋಷಣೆ.
2. 01-01-2020ನೇ ಸಾಲಿನ ವೇತನ ಪರಿಷ್ಕರಣೆಯನ್ನು 2023ರಲ್ಲಿ ಮಾಡಿದ ಅಂದಿನ ಸರ್ಕಾರ 38 ತಿಂಗಳ ವೇತನ ಪರಿಷ್ಕರಣೆಯ ಬಾಕಿ ಮೊಬಲಗನ್ನು ಈವರೆಗೆ ನೀಡಿದೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು.
3. 01-01-2024ನೇ ಸಾಲಿಗೆ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು. ಆದರೆ, ದಪ್ಪ ಚರ್ಮದ ಸರ್ಕಾರಕ್ಕೆ ಈವರೆಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಬೇಕೆಂಬ ಸಾಮಾನ್ಯ ಜ್ಞಾನ ಕೂಡ ಇಲ್ಲ.
4. 2018-2019ನೇ ಸಾಲಿನಿಂದ ಸಿಬ್ಬಂದಿಗಳ ಗಳಿಕೆ ರಜೆ ನಗದೀಕರಣವನ್ನು ಸ್ಥಗಿತಗೊಳಿಸುವ ಮೂಲಕ ನೂರಾರು ಕೋಟಿ ರೂಪಾಯಿಗಳು ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿದೆ.
5. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸಂಸ್ಥೆಯ ಸಿಬ್ಬಂದಿಗಳಿಗೆ ನೀಡಬೇಕಾದ ಆರ್ಥಿಕ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡದೆ ನಿವೃತ್ತಿ ಹೊಂದಿದ ನಂತರವೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತೆ ಮಾಡಿವೆ ಈವರೆಗೆ ಬಂದು ಹೋದ ಎಲ್ಲ ಸರ್ಕಾರಗಳು.
6. ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿ ಆದೇಶ ನೀಡಿದ್ದಾರೆ. “ಸರ್ಕಾರಿ ನೌಕರರಿಗೆ ಬೆಣ್ಣೆ, ಸಾರಿಗೆ ಸಿಬ್ಬಂದಿಗಳಿಗೆ ಸುಣ್ಣ” ನೀಡುತ್ತಿದ್ದಾರೆ.
7. ರಾಜ್ಯ ಸರ್ಕಾರದ ಅಧೀನದಲ್ಲಿರುವ ಬೇರೆ ಎಲ್ಲ ನಿಗಮ ಮಂಡಳಿಗಳು, ಸಂಸ್ಥೆಯ ಸಿಬ್ಬಂದಿಗಳಿಗೆ ಆಯಾ ಕಾಲಕ್ಕೆ ವೇತನ ಪರಿಷ್ಕರಣೆ ಮಾಡುತ್ತಾ ಬಾಕಿ ಉಳಿಸಿಕೊಳ್ಳದೆ ವೇತನ ಸಂದಾಯ ಮಾಡುತ್ತಾ ಬರುತ್ತಿದೆ. ಆದರೆ ಸಾರಿಗೆ ಸಿಬ್ಬಂದಿಗಳ ಬಗ್ಗೆ ತಾರತಮ್ಯ ವೆಸಗಲಾಗುತ್ತಿದೆ. ಏಕೀ ಧೋರೆಣೆ?
8. ರಾಜ್ಯದಲ್ಲಿ ಆಡಳಿತ ನಡೆಸಿದ ಈವರೆಗೆ ಬಂದು ಹೋದ ಎಲ್ಲ ಸರ್ಕಾರಗಳು ಸಂಸ್ಥೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹತ್ತು ಹಲವು ಬಗೆಯ ಪಾಸುಗಳನ್ನು ಘೋಷಿಸಿವೆ. ಪ್ರಸಕ್ತ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಸರ್ಕಾರದ ಯೋಜನೆಗಳನ್ನು ಖಂಡಿತವಾಗಿಯೂ ಸ್ವಾಗತಿಸೋಣ. ಆದರೆ, ತಮ್ಮ ಕುಟುಂಬಗಳಿಂದ ದೂರ ಉಳಿದು ಹಗಲಿರುಳು ಎನ್ನದೆ ದುಡಿದು ಸರ್ಕಾರಕ್ಕೆ ಕೀರ್ತಿ ತಂದು ಕೊಡುವ ಪ್ರತಿನಿತ್ಯ ಕೋಟ್ಯಂತರ ಪ್ರಯಾಣಿಕರಿಗೆ ನಿಷ್ಕಲ್ಮಶ ಸೇವೆ ಸಲ್ಲಿಸುತ್ತಿರುವ ವೀರ ಯೋಧರಂತೆ ದುಡಿಯುತ್ತಿರುವ ಸಾರಿಗೆ ಸಿಬ್ಬಂದಿಗಳ ಬಗ್ಗೆ ತಾರತಮ್ಯವೇಕೆ?
9. ಈವರೆಗೆ ಕರ್ನಾಟಕದಲ್ಲಿ ಸರ್ಕಾರದ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಸಾರಿಗೆ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತಾ ಬಂದಿವೆ.
10. ಸಾರಿಗೆ ಸಿಬ್ಬಂದಿಗಳ ವೇತನದಿಂದ ಕಡಿತಗೊಳಿಸುವ ಭವಿಷ್ಯನಿಧಿ, ಜೀವ ವಿಮೆ, ಅಂಚೆ ಜೀವ ವಿಮೆ, ಬ್ಯಾಂಕ್ ಸಾಲಗಳ ಮೊತ್ತ ಹಾಗೂ ಸಹಕಾರಿ ಸೊಸೈಟಿಗಳಿಗೆ ನಿಗದಿತ ಸಮಯಕ್ಕೆ ಪಾವತಿಸದೆ ನೂರಾರು ಕೋಟಿ ರೂಪಾಯಿಗಳನ್ನು ಬಡ್ಡಿಯಾಗಿ ಸಂಸ್ಥೆ ಪಾವತಿಸಿದೆ.
ಸಮಸ್ತ ಸಾರಿಗೆ ಸಿಬ್ಬಂದಿಗಳು ಹಾಗೂ ರಾಜ್ಯದ ನಾಗರಿಕರು ಸರ್ಕಾರದ ಈ ಇಬ್ಬಗೆ ನೀತಿಯ ಬಗ್ಗೆ ಧ್ವನಿಯೆತ್ತುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣವೆಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ನೀತಿಯನ್ನು ವಿಧಾನ ಸೌಧಕ್ಕೆ ತಲುಪಿಸುವ ಮೂಲಕ ಸರ್ಕಾರದ ಕಣ್ಣು ತೆರೆಸಿ. ನಾನು ಸಾರಿಗೆ ನೌಕರರು ಪಾಪದವರಲ್ಲ ಎಂಬುದನ್ನು ತಿಳಿಸಿ ಇದು ನಮ್ಮ ವಿನಮ್ರ ಮನವಿ. ದಯಮಾಡಿ ಈ ಬಗ್ಗೆ 7 ಕೋಟಿ ರಾಜ್ಯ ಜನತೆ ನಮಗೆ ಧ್ವನಿಯಾಗಬೇಕು ಎಂದು ಬೇಡಿಕೊಳ್ಳುತ್ತೇನೆ.
ಇನ್ನು ಸಮಸ್ತ ಸಾರಿಗೆ ಸಿಬ್ಬಂದಿಗಳು ಜಾತಿ ಸಂಘಟನೆಗಳಿಂದ ಹೊರಬನ್ನಿ 6-7 ಗಂಟೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಬರಪೂರ ಕೊಡುಗೆ, ಬೇಸಿಗೆ, ಚಳಿ, ಮಳೆಗಾಲ ಎನ್ನದೆ 24 ಗಂಟೆ ದುಡಿಯುವ ಸಾರಿಗೆ ಸಿಬ್ಬಂದಿಗಳಿಗೆ ಏಕೆ ಅನ್ಯಾಯ? ಇದನ್ನು ಸರಿಪಡಿಸಬೇಕಾದ ಸಂಘಟನೆಗಳು ಇನ್ನಾದರೂ ಕಾಳಜಿ ತೆಗೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.
ಎನ್.ಶ್ರೀನಿವಾಸ, ಸಂಸ್ಥೆಯ ಸಿಬ್ಬಂದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ
ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಕರಾಳ ಸ್ವಾತಂತ್ರ್ಯೋತ್ಸವ AUGUST 2024 INDEPENDENCE DAY
ಸಾರಿಗೆ ನೌಕರರು ತಮ್ಮ ಹಕ್ಕುಗಳಿಗಾಗಿ ಸರ್ಕಾರಗಳನ್ನು ಕೇಳಿ ಸರ್ಕಾರಗಳು ಇವರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಕೊನೆಗೆ ಮುಷ್ಕರ ಎಂಬ ಅಸ್ತ್ರವನ್ನು ಪ್ರಯೋಗಿಸಿದಾಗ ,ರಾಜ್ಯದ ಜನರಿಗೆ ತುಂಬಾ ತೊಂದರೆ ಆಯಿತು ಎಂದು ಬೊಬ್ಬೆ ಇಡುವ ಕೆಲವು ಟಿವಿ ಚಾನೆಲ್ಗಳು ಹಾಗೂ ಪತ್ರಿಕಾ ಮಾಧ್ಯಮದವರು ಈಗೇನು ಕತ್ತೆ ಕಾಯ್ತಾ ಇದ್ದಾವ ?.ಈಗ ಸರ್ಕಾರವನ್ನು ಎಚ್ಚರಿಸಬಹುದಲ್ಲವೇ .ಹಾಗೆಯೇ ಮಾನ್ಯ ನ್ಯಾಯಾಲಯಗಳೂ ಸಹ ಈ ಬಗ್ಗೆ ಸರ್ಕಾರಕ್ಕೆ ಸೂಚಿಸಬಹುದಲ್ಲವೇ .ಸಂಕಟ ಬಂದಾಗ ವೆಂಕಟರಮಣ ಅನ್ನೋ ಬದಲು ಈ ಸರ್ಕಾರಗಳು ಈಗೇಕೆ ಜಾಣ ಕುರುಡು ಪ್ರದರ್ಶನ ಮಾಡುತ್ತಿವೆ , ಅದಕ್ಕೇ ಅಂತ ಒಬ್ಬ ಸಚಿವ ಇದ್ದಾರಲ್ಲ ಅವರಿಗೆ ಇದೆಲ್ಲವೂ ಗೊತ್ತಿಲ್ಲವೆ