ತುಮಕೂರು: ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಮುಂದೆ ಅನ್ನದಾತ ವೃದ್ಧರೊಬ್ಬರು ಅಳಲು ತೋಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ನಡೆದಿದೆ.
ನಮ್ಮ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಸರ್ಕಾರ ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ ಎಂದು ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾನೆ.
ತುಮಕೂರು ಜಿಲ್ಲೆಯ ಶಿರಾ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಇಂದು ಆಯೋಜಿಸಿದ್ದ ಜನತಾ ದರ್ಶನದಲ್ಲಿ ನೂತನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಶಿರಾ ಶಾಸಕ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು.
ಜನತಾ ದರ್ಶನಕ್ಕೆ ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರೈತ ಜಯರಾಮಪ್ಪ ಕೂಡ ಆಗಮಿಸಿದ್ದರು. ರೈತ ರಾಮಪ್ಪ ಒಂದು ಅರ್ಜಿಯನ್ನು ತಂದಿದ್ದು, ಅದರಲ್ಲಿ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ದಯವಿಟ್ಟು ನಮ್ಮ ಮಕ್ಕಳಿಗೆ ಹೆಣ್ಣು ಕೊಡ್ಸಿ ಎಂದು ಮನವಿ ಮಾಡಿದ್ದಾರೆ.
ಜಗತ್ತಿಗೆ ಅನ್ನದಾತ ರೈತ ಈ ದೇಶದ ಬೆನ್ನೆಲುಬು. ನಾಡಿಗೆ ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ನಮಗೆ ಬೇಡ. ಕನ್ಯಾಭಾಗ್ಯ ಯೋಜನೆ ಜಾರಿಗೊಳಿಸಿ ರೈತ ಮಕ್ಕಳಿಗೆ ಮದುವೆ ಮಾಡಿಸಿ ಎಂದು ಕೋರಿದ್ದಾರೆ. ನಾಡಿಗೆ ಅನ್ನ ಹಾಕೋ ರೈತ ಎಂಬ ಹೊಗಳಿಕೆ ಮಾತು ಬೇಡ, ರೈತರ ಮಕ್ಕಳಿಗೆ ಹೆಣ್ಣು ಕೊಡಿ ಇಲ್ಲ, ಸರ್ಕಾರಿ ಕೆಲಸ ಕೊಡಿ.. ಸರ್ಕಾರ ಕನ್ಯಾಭಾಗ್ಯ ಯೋಜನೆ ಜಾರಿ ಮಾಡಿ ಎಂದು ರೈತ ಜಯರಾಮಪ್ಪ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಡಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ರೈತರ ಮಕ್ಕಳಿಗೆ ಹೆಣ್ಣು ಕೊಡಿಸಿ ಎಂದು ಮನವಿ ಮಾಡಿದ ರೈತ ಜಯರಾಮಪ್ಪ, ಎಲ್ಲರೂ ಓದಿರುವವರೇಬೇಕು, ಕೆಲಸದಲ್ಲಿರುವವರೇ ಬೇಕು ಎಂದರೆ ಹೇಗೆ. ಅನ್ನದಾತರ ಮಕ್ಕಳಿಗೆ ಕಂಕಣಭಾಗ್ಯ ಕೂಡಿಬರುವುದು ಯಾವಾಗ. ದಯಮಾಡಿ ರೈತರ ಮಕ್ಕಳಿಗೆ ಹೆಣ್ಣು ಕೊಡುವ ಯೋಜನೆ ಜಾರಿ ಮಾಡಿ ಎಂದು ಮನವಿ ಮಾಡಿದರು.
ನಾನು ಸುಮಾರು 8 ವರ್ಷಗಳಿಂದ ಕೃಷಿ ಮಾಡುತ್ತಿರುವ ನಮ್ಮ ಮಗನಿಗಾಗಿ ಹೆಣ್ಣು ಹುಡುಕಿ ಸುಸ್ತಾಗಿದ್ದೇನೆ. ಹೀಗಾಗಿ ನೊಂದು ಕೊನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ನೋಡೋಣ ಅನ್ನೋ ಉತ್ತರ ಕೊಟ್ಟಿದ್ದು ಬಿಟ್ಟರೆ ಬೇರೇನು ಮಾತನಾಡಲಿಲ್ಲ.