ತುಮಕೂರು: ರಾಜ್ಯಾದ್ಯಂತ ಪ್ರವಾಸದ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಹುಲಿಯೂರು ದುರ್ಗದ ಹೇರೋಹಳ್ಳಿ ಗ್ರಾಮದಲ್ಲಿ ಇಂದು ಸೆ.10ರ ಭಾನುವಾರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಂಜೆ 4.30ಕ್ಕೆ ಹಮ್ಮಿಕೊಂಡಿರುವ ‘ಎಲ್ಲಾ ಸೇರೋಣ, ಬನ್ನಿ ಮಾತನಾಡೋಣ!’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜೊತೆ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಕ್ಷಣದ ಗುಣಮಟ್ಟ ಸರಿಪಡಿಸದೆ ಕುಟುಂಬದ ಏಳ್ಗೆ ಸಾಧ್ಯವೇ? ಆರೋಗ್ಯ ವ್ಯವಸ್ಥೆ ಸರಿಪಡಿಸದೆ ಸಮಾಜ ಸದೃಢವಾಗಿರಲು ಸಾಧ್ಯವೇ? ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೆ ರೈತನ ಋಣ ತೀರಿಸುವುದು ಸಾಧ್ಯವೇ? ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದೆ ಸಮಾಜದ ಏಳ್ಗೆ ಸಾಧ್ಯವೇ? – ಹೀಗೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.
ಬೆಳಗ್ಗೆ 11.30ಕ್ಕೆ ನಗರದ ಸುಧಾ ಟೀ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಜಿಲ್ಲಾ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ ಹುಲಿಯೂರು ದುರ್ಗದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಲಿಯೂರು ಮಠಕ್ಕೆ ಭೇಟಿ ನೀಡಲಿದ್ದು, ಅಲ್ಲಿಯೇ ತಂಗಲಿದ್ದಾರೆ.
ನಾಳೆ ಸೆ.11ರ ಸೋಮವಾರ ಚಿತ್ರದುರ್ಗ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದು, ಬಳಿಕ ಜಿಲ್ಲಾ ಪದಾಧಿಕಾರಿಗಳ ಜೊತೆ ಸಭೆ ನಡೆಸುವರು. ಸಂಜೆ 4 ಗಂಟೆಗೆ ಕಾವಡಿಗರ ಹಟ್ಟಿಯಲ್ಲಿ ಸಾರ್ವಜನರಿಕರ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುವರು. ಬಳಿಕ ಆನಂದಪುರಕ್ಕೆ ತೆರಲಿ, ಅಲ್ಲಿಯೇ ತಂಗುವರು.
ಸೆ.12ರ ಮಂಗಳವಾರ ದಾವಣಗೆರೆ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಸ್ಥಳೀಯ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ನಂತರ ಹರಿಹರದಲ್ಲಿ ಆಯೋಸಿರುವ ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವರು.