ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಬಂದಮೇಲೆ ದಿನಕ್ಕೆ 80 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳವರೆಗೆ ಲಂಚದ ಹಣವಿಲ್ಲದೆ ವಾಪಸ್ ಮನೆಗೆ ಹೋಗುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು, ನಿರ್ವಾಹಕರು, ಚಾ ಕಂ ನಿ ಮತ್ತು ತಾಂತ್ರಿಕ ಸಿಬ್ಬಂದಿಗಳು ತುರ್ತು ಸಮಯದಲ್ಲಿ ಗೈರಾದರೆ, ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೆ ಅದನ್ನು ಮೌಖಿಕವಾಗಿ ಎಚ್ಚರಿಕೆ ನೀಡಿ ಕ್ಷಮಿಸಬಹುದು. ಆದರೆ ಅಂತಹ ಸಣ್ಣ ತಪ್ಪುಗಳಿಗೂ ಅಮಾನತು ಶಿಕ್ಷೆ ನೀಡಿ ಬಳಿಕ ಸಾವಿರಾರು ರೂ. ಲಂಚ ಪಡೆದು ಮರಳಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆರೋಪವಿದೆ.
ನೌಕರರಿಗೆ ಇಷ್ಟೆಲ್ಲ ತೊಂದರೆ ಕೊಡುತ್ತಿರುವ ಈ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಸರು ಕೆ.ಆರ್. ಬಸವರಾಜು. ಇವರ ಅಧಿಕಾರದ ಬಗ್ಗೆ ಹೇಳಬೇಕೆಂದರೆ ಇವರು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಪೂರ್ಣ ಪ್ರಮಾಣದಲ್ಲಿ ಇರುವ ಅರ್ಹತೆ ಇಲ್ಲ.
ಇವರನ್ನು 17/1 ರಡಿ ಡಿಸಿ ಆಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿ ಇವರು ಕೇವಲ ಒಂದು ವರ್ಷದವರೆಗೆ ಮಾತ್ರ ಇರಬೇಕು ಎಂಬ ನಿಯಮವಿದೆಯಂತೆ ಆದರೆ ನೇಮಕಗೊಂಡು 2 ವರ್ಷವಾದರೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. ಅಂದರೆ ಮೇಲಧಿಕಾರಿಗಳಿಗೂ ಇವರ ಲಂಚದ ಚೂರು ಹೋಗುತ್ತಿರಬಹುದು ಎಂದು ನೌಕರರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಡಿಸಿ ಬಸವರಾಜು ಅವರಿಗೆ ತುಮಕೂರು ಸಾರಿಗೆ ವಿಭಾಗದ ಎಲ್ಲ ಡಿಪೋಗಳಲ್ಲೂ ಹಿಂಬಾಲಕರಿದ್ದು, ಅವರು ನೌಕರರು ಮಾಡದ ತಪ್ಪಿಗೂ ದೊಡ್ಡ ಪ್ರಮಾಣದಲ್ಲಿ ಶಿಕ್ಷೆಯಾಗುತ್ತದೆ ಎಂದು ಹೆದರಿಸಿ ಅವರಿಂದ 20 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳವರೆಗೂ ವಸೂಲಿ ಮಾಡಿ ಅದರಲ್ಲಿ ಇಂತಿಷ್ಟು ಎಂದು ತಮ್ಮ ಕಮಿಷನ್ ಹಿಡಿದರುಕೊಂಡು ಉಳಿದ ಹಣವನ್ನು ಡಿಸಿಗೆ ಯಾವುದೇ ಭಯವಿಲ್ಲದೆ ತಲುಪಿಸುತ್ತಿದ್ದಾರೆ ಎಂದು ನೌಕರರು ಹೇಳಿದ್ದಾರೆ.
ಇನ್ನು ಡಿಸಿ ಬಸವರಾಜು ಅವರ ಬ್ಯಾಂಕ್ ಖಾತೆಗೆ ನೇರವಾಗಿ ತಾಂತ್ರಿಕ ಸಿಬ್ಬಂದಿ ಮತ್ತು ಇತರ ಡಿಸಿ ಹಿಂಬಾಲಕರು ಹಣ ಜಮಾ ಮಾಡಿದ್ದಾರೆ ಎಂಬುವುದು ಕೂಡ ತಿಳಿದು ಬಂದಿದೆ. ಇದಿಷ್ಟೇ ಅಲ್ಲ ಅವರ ಹಿಂಬಾಲಕರು ಕುಣಿಗಲ್, ಶಿರಾ, ಮಧುಗಿರಿ, ತುತುವೇಕೆರೆ, ತಿಪಟೂರು ಮತ್ತು ತುಮಕೂರು ಡಿಪೋಗಳಲ್ಲಿ ಇದ್ದು ನೌಕರರನ್ನು ಸುಲಿಗೆ ಮಾಡುತ್ತಿದ್ದಾರೆ.
ಕುಣಿಗಲ್ ಡಿಪೋನಲ್ಲಿ ಜೂನಿಯರ್ ಅಸಿಸ್ಟೆಂಟ್ ರೆಹಮಾನ್, ರಿಟೈಡ್ ಬಸವರಾಜು, ತುಮಕೂರು ವಾಹನ ನಿಲ್ದಾಣದಲ್ಲಿ ಟೆಂಟೆನ್ ನಾಗರಾಜು (ಟಿಸಿ) ಮತ್ತು ಮಧುಗಿರಿಯಲ್ಲಿ ಜೂನಿಯರ್ ಅಸಿಸ್ಟೆಂಟ್ ಬಾಬುರಾಜೇಂದ್ರ ಪ್ರಸಾದ್, ತುಮಕೂರು ಡಿಸಿ ಕಚೇರಿಯಲ್ಲಿ ವಿಶ್ವನಾಥ್ (ಡಿಫಾಲ್ಟ್ ಸೂಪರ್‌ವೈಸರ್), ಮುರಳೀಧರ (ಇಎಸ್‌ಟಿ ಸೂಪರ್‌ವೈಸರ್), ಭೀಮಾನಾಯಕ್ (ಸಹಾಯಕ ಲೆಕ್ಕಿಗ), ಪ್ರಸಾದ್ ಹೊನ್ನುಡಿಕೆ.
ತುಮಕೂರು 1 ನೇ ಘಟಕದ ಡಿಎಂ ತುಳಸೀರಾಮ್, ತುಮಕೂರು 2ನೇ ಘಟಕದಲ್ಲಿ ಎಟಿಐ ನವೀನ್ ಕುಮಾರ್, ಶಿರಾ ಘಟಕ ಜೂನಿಯರ್ ಅಸಿಸ್ಟೆಂಟ್ ಮಂಜುನಾಥ್, ಎಟಿಎಸ್ ಬಸವರಾಜು, ತುವೇಕೆರೆ ಘಟಕ ಚಾಲಕ ಅನಂತ್ ಕುಮಾರ್, ಎಟಿಎಸ್ ಶ್ರೀನಿವಾಸ್, ಸಹಾಯಕ ಲೆಕ್ಕಿಗ ಲೋಹಿತ್, ತಿಪಟೂರು ಘಟಕ ಇಎಸ್‌ಟಿ ಸೂಪರ್‌ವೈಸರ್ ಶೇಖರ್, ಅಕೌಂಟ್ ಸೂಪರ್‌ವೈಸರ್ ಹರೀಶ್, ಜೂನಿಯರ್ ಅಸಿಸ್ಟೆಂಟ್ ಪುನೀತ್. ಇವರೆಲ್ಲರೂ ಡಿಸಿ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನೌಕರರು ತಿಳಿಸಿದ್ದಾರೆ.
ಡಿಸಿ ಬಸವರಾಜು ತುಮಕೂರಿಗೆ ಬಂದಮೇಲೆ 180 ರಿಂದ 200ಮಂದಿ ವರ್ಗಾವಣೆ ಮಾಡಲಾಗಿದ್ದು ಬಹುತೇಕ ಈ ಎಲ್ಲ ನೌಕರರಿಂದ ಲಂಚ ಪಡೆದು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ವರ್ಷಕ್ಕೆ ಒಂದು ಬಾರಿ ಸಾಮಾನ್ಯ ವರ್ಗಾವಣೆ ಮಾಡಬೇಕು ಎಂಬ ನಿಯವಿದೆ ಆದರೆ ಆ ನಿಯಮವನ್ನು ಗಾಳಿಗೆ ತೂರಿ ಇವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.
ಇನ್ನು ವಿಶೇಷವೆಂದರೆ 20 ಸಾವಿರದಿಂದ 40 ಸಾವಿರ ರೂ.ಗಳವರೆಗೆ ಲಂಚ ಕೊಟ್ಟು ತಾವು ಕೇಳಿದ ಸ್ಥಳಕ್ಕೆ ಈವರೆಗೂ ವರ್ಗಾವಣೆ ಆಗದೆ ಹಲವು ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಧುಗಿರಿ ಘಟಕದ ಎಟಿಐ ಶ್ರೀನಿವಾಸ್ ಅವರಿಗೆ 10 ಸಾವಿರ ರೂ. ಫೋನ್ ಪೇಯನ್ನು ಚಾಲಕನ ಪತ್ನಿಯೊಬ್ಬರು ಮಾಡಿದ್ದು, ಕಾರಣ ಡಿಸಿ ಸಬವರಾಜು ಚಾಲಕನನ್ನು ವಜಾ ಮಾಡುವುದಾಗಿ ಬೆದರಿಸಿ ಈ ಶ್ರೀನಿವಾಸ್ ಮೂಲಕ ಲಂಚ ಪಡೆದಿದ್ದಾರೆ. ಆದರೆ ಇನ್ನು 40 ಸಾವಿರ ರೂ. ಬಾಕಿ ಕೊಟ್ಟಿಲ್ಲ ಎಂದು ಕಳೆದ 8 ತಿಂಗಳ ಹಿಂದೆಯೇ ಆ ಚಾಲಕನ್ನನ್ನು ವಜಾ ಮಾಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಡಿಸಿ ಬಸವರಾಜು ತಪ್ಪು ಮಾಡಿರುವುದರ ಬಗ್ಗೆ ತನಿಖಾಧಿಕಾರಿ ಲಕ್ಷ್ಮಣ ಅವರು ಕೇಂದ್ರ ಕಚೇರಿಗೆ ವರದಿ ಸಲ್ಲಿಸಿ 5-6 ತಿಂಗಳುಗಳು ಕಳೆದರೂ ಕೇಂದ್ರ ಕಚೇರಿಯ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.
ನೌಕರರು ಮಾಡಿರುವ ಆರೋಪಗಳೆಲ್ಲ ಸುಳ್ಳು ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಕೊಡಲು ಹೇಳಿ.
l ಬಸವರಾಜು, ವಿಭಾಗೀಯ ನಿಯಂತ್ರಣಾಧಿಕಾರಿ ತುಮಕೂರು