CRIMENEWSನಮ್ಮಜಿಲ್ಲೆ

K.R.ಪೇಟೆ – ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಕೇಸ್‌ ದಾಖಲು

ವಿಜಯಪಥ ಸಮಗ್ರ ಸುದ್ದಿ

ಕೃಷ್ಣರಾಜಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದ ಹುಲ್ಲಿನ ಮೆದೆಯಲ್ಲಿ ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಗ್ರಾಮಾಂತರ ಠಾಣೆಯಲ್ಲಿ ಗ್ರಾಮದ ಸವರ್ಣಿಯ ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಗ್ರಾಮದ ನಿವಾಸಿ ಕೃಷ್ಣೇಗೌಡ ಎಂಬುವರ ಮಗ ಅನಿಲ್ ಕುಮಾರ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ದಲಿತ ಯುವಕ ಜಯಕುಮಾರ್ ಪತ್ನಿ ಲಕ್ಷ್ಮೀ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಅನಿಲ್‌ ಕುಮಾರ್ ನಾಪತ್ತೆಯಾಗಿದ್ದಾನೆ.

ಘಟನೆ ವಿವರ: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಸಿದ್ದಯ್ಯ ಎಂಬುವರಿಗೆ ಸೇರಿರುವ ಗ್ರಾಂಟ್ ಜಮೀನಿನಲ್ಲಿ ಅನಿಲ್ ಕುಮಾರ್ ಅಕ್ರಮವಾಗಿ ಹುಲ್ಲಿನ ಮೆದೆಯನ್ನು ಹಾಕಿಕೊಂಡಿದ್ದು, ತನ್ನ ಜಮೀನಿನಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಹುಲ್ಲಿನ ಮೆದೆಯನ್ನು ತೆರವು ಮಾಡಿಕೊಡುವಂತೆ ಗ್ರಾಮದಲ್ಲಿ ರಾಜಿ ಪಂಚಾಯ್ತಿ ಮಾಡಿ ಅದು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಯಕುಮಾರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೊನ್ನೆ ಕೂಡ ಈ ವಿಚಾರವಾಗಿ ಅನಿಲ್ ಮತ್ತು ಜಯಕುಮಾರ್ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಪರಸ್ಪರ ಗಲಾಟೆ ಗದ್ದಲ ನಡೆದಿದ್ದು ನಾನು ಹುಲ್ಲಿನ ಮೆದೆಯನ್ನು ತೆರವುಗೊಳಿಸಲ್ಲ, ಮೆದೆಗೆ ಬೆಂಕಿ ಹಾಕ್ತಿನಿ ನೀನು ಬೆಂಕಿಯೊಳಗೆ ಬಿದ್ದು ಸಾಯಿ, ಇಲ್ಲದಿದ್ದರೆ ನಾನೇ ನಿನ್ನನ್ನು ಸಾಯಿಸುತ್ತೇನೆ ಎಂದು ಸನಿಲ್‌ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ ಜಯಕುಮಾರ್ ಉರಿಯುತ್ತಿರುವ ಹುಲ್ಲಿನ ಮೆದೆಯೊಳಕ್ಕೆ ಹಾರಿ ಸಾವಿಗೆ ಶರಣಾಗಿದ್ದಾರೆ. ನನ್ನ ಪತಿಯ ಸಾವಿಗೆ ಅನಿಲ್ ಕಾರಣ ಎಂದು ಲಕ್ಷ್ಮೀ ದೂರು ನೀಡಿದ್ದಾರೆ.

ಈಗ ಆರೋಪಿ ಅನಿಲ್ ಕುಮಾರ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ನಾಗಮಂಗಲ ಡಿವೈಎಸ್‌ಪಿ ಚಲುವರಾಜು ಅವರು ಅನಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಯಕುಮಾರ್ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುಧಾರರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು.

ಈ ವೇಳೆ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮ್, ತಾಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ದಲಿತ ಮುಖಂಡರಾದ ಚನ್ನಕೇಶವ, ರಂಗಸ್ವಾಮಿ, ಬಂಡಿಹೊಳೆ ರಮೇಶ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಆನಂದ್ ಗೌಡ, ಮೃತ ಜಯಕುಮಾರ್ ಪತ್ನಿ ಲಕ್ಷ್ಮೀ, ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಕತ್ತರಘಟ್ಟ ಗ್ರಾಮಸ್ಥರು ಇದ್ದರು.

Megha
the authorMegha

Leave a Reply

error: Content is protected !!