ಹಾವೇರಿ: ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಅಮೋಘವಾಗಿ ಗೆಲುವು ಸಾಧಿಸಿರುವ ಹಳ್ಳಿಹೈದ ಕುರಿಗಾಹಿ ಹಾಗೂ ಹಾಡುಗಾರ ಹನುಮಂತು ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಬಿಗ್ಬಾಸ್ ವಿನ್ನರ್ ಹನುಮಂತು ಅವರ ಚಿಕ್ಕಪ್ಪ ದೇವಪ್ಪ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮಂತು ಬಿಗ್ಬಾಸ್ ಟ್ರೋಫಿ ಗೆದ್ದರೂ ಯಾವುದೇ ಸಂಭ್ರಮಾಚರಣೆ ಮಾಡದಿರಲು ಸ್ನೇಹಿತರು, ಕುಟುಂಬಸ್ಥರು, ಗ್ರಾಮಸ್ಥರು ನಿರ್ಧಾರಿಸಿದ್ದಾರೆ.
ಬಿಗ್ಬಾಸ್ನಲ್ಲಿ ವಿನ್ ಆಗುತ್ತಿದ್ದಂತೆ ಹನುಮಂತನ ನೋಡಲು ಊರಿಗೆ ಸಾಕಷ್ಟು ಅಭಿಮಾನಿಗಳು, ಸ್ನೇಹಿತರು, ಸಂಬಂಧಿಗಳು ಆಗಮಿಸಿದ್ದಾರೆ. ಆದರೆ ಇವರಿಗೆಲ್ಲ ಈಗ ನಿರಾಸೆಯಾಗಿದೆ. ಸದ್ಯಕ್ಕೆ ಯಾವುದೇ ಸಂಭ್ರಮಾಚರಣೆ ಮಾಡದಿರಲು ನಿರ್ಧಾರ ಮಾಡಲಾಗಿದೆ.
ಇನ್ನು ಮೂರು ದಿನದ ಚಿಕ್ಕಪ್ಪನ ಕಾರ್ಯ ಮುಗಿಸಿದ ನಂತರ ಸಂಭ್ರಮಾಚರಣೆ ಮಾಡಲು ಗ್ರಾಮಸ್ಥರು ಸೇರಿ ಎಲ್ಲರೂ ನಿರ್ಧರಿಸಿದ್ದಾರೆ. ಹನುಮಂತ ಹಾಗೂ ತಂದೆ, ತಾಯಿ, ಕುಟುಂಬಸ್ಥರು ಸದ್ಯ ಬೆಂಗಳೂರಿನಲ್ಲೇ ಇದ್ದಾರೆ. ಅತ್ತ ಊರಿನಲ್ಲಿ ಸ್ನೇಹಿತರು, ಅಭಿಮಾನಿಗಳು ಅನುಮಂತನ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.