NEWSನಮ್ಮಜಿಲ್ಲೆಬೆಂಗಳೂರು

ಡಾಂಬರೀಕರಣಕ್ಕೆ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಬಳಸಿ: ಮಹೇಶ್ವರ್ ರಾವ್

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ
  • “ಮುಖ್ಯ ಆಯುಕ್ತರಿಂದ ಪೌರಕಾರ್ಮಿಕರೊಂದಿಗೆ ಚಹಾ ಸಂವಾದ”
  • 369 ವಾರ್ಡ್‌ಗಳಲ್ಲಿಯೂ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪಿಸಲು ಆಗ್ರಹ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಅನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ವಚ್ಛ ಸರ್ವೇಕ್ಷಣಾ 2025-26 ರ ಅಂಗವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಂಜನಾಪುರ ವಾರ್ಡ್ ವ್ಯಾಪ್ತಿಯ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಇಂದು ಭೇಟಿ ನೀಡಿ “ ಪೌರಕಾರ್ಮಿಕರೊಂದಿಗೆ ಚಹಾ ಸಂವಾದ” ನಡೆಸಿ ಅವರು ಮಾತನಾಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಈಗಾಗಲೇ ಪ್ರತಿದಿನ 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (ಆರ್.ಡಿ.ಎಫ್) ಸಂಗ್ರಹಿಸಲಾಗುತ್ತಿದ್ದು, ಅದನ್ನು ಸಿಮೆಂಟ್ ತಯಾರಿಕಾ ಘಟಕಗಳಿಗೆ ಕಳುಹಿಸಿ ಅದರಿಂದ ಇ.ಪಿ.ಆರ್ ಕ್ರೆಡಿಟ್ ಪಡೆಯಲಾಗುತ್ತಿದೆ. ಇದೇ ಮಾದರಿಯಲ್ಲಿ ನಾಗರಿಕರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಿ, ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ನೀಡುವ ಮೂಲಕ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಉತ್ಪತ್ತಿ ಪ್ರಮಾಣವನ್ನು ಹೆಚ್ಚಿಸಬೇಕು. ಇದನ್ನು ರಸ್ತೆ ಡಾಂಬರೀಕರಣ ಕಾರ್ಯಗಳಲ್ಲಿ ಬಳಸಿಕೊಳ್ಳಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಕಾರ್ಮಿಕರೊಂದಿಗೆ ಚಹಾ ಸಂವಾದ: ಅಂಜನಾಪುರ ವಾರ್ಡ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯ ಆಯುಕ್ತರು ಪೌರಕಾರ್ಮಿಕರೊಂದಿಗೆ ಚಹಾ ಸೇವಿಸಿ, ಕೆಲಕಾಲ ಅವರೊಂದಿಗೆ ಸಂವಾದ ನಡೆಸಿದರು. ಯಾವ ಸಮಯಕ್ಕೆ ಕೆಲಸಕ್ಕೆ ಬರುತ್ತೀರಿ, ಎಷ್ಟು ಸಮಯ ಕೆಲಸ ಮಾಡುತ್ತೀರಿ, ಹಾಜರಾತಿ ಹೇಗೆ ಹಾಕುತ್ತೀರಿ, ಸುರಕ್ಷತಾ ಪರಿಕರಗಳನ್ನು ಬಳಸುತ್ತೀರಾ ಎಂಬ ವಿಷಯಗಳ ಬಗ್ಗೆ ವಿಚಾರಿಸಿದರು.

ಸ್ವಚ್ಛ ಸರ್ವೇಕ್ಷಣಾ ಕುರಿತು ಜಾಗೃತಿ: ಸ್ವಚ್ಛ ಸರ್ವೇಕ್ಷಣಾ 2025-26ರಲ್ಲಿ ಬೆಂಗಳೂರಿಗೆ ಉತ್ತಮ ಅಂಕ ತಂದುಕೊಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಿಮಗೆ ವಹಿಸಲಾದ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ನೀವು ಸ್ವಚ್ಛಗೊಳಿಸುವ ಬೀದಿಗಳು ಪ್ರತಿದಿನ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಅದಲ್ಲದೆ ರಸ್ತೆ ಬದಿ, ಪಾದಚಾರಿ ಮಾರ್ಗಗಳು ಹಾಗೂ ಖಾಲಿ ಜಾಗಗಳಲ್ಲಿ ಯಾರಾದರೂ ಕಸ ಎಸೆಯುತ್ತಿರುವುದು ಕಂಡುಬಂದಲ್ಲಿ, ಅಂತಹವರಿಗೆ ಮನೆಗಳ ಹತ್ತಿರ ಬರುವ ಆಟೋ ಟಿಪ್ಪರ್‌ಗಳಿಗೆ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡುವಂತೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮಗ್ರ ಯೋಜನೆ ಸಿದ್ಧಪಡಿಸಿ: ಅಂಜನಾಪುರ ವ್ಯಾಪ್ತಿಯ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಹಾಗೂ ಮಿನಿ ಟ್ರಾನ್ಸ್‌ಫರ್ ಸ್ಟೇಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸ್ಥಳದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಆರ್‌.ಆರ್‌.ಆರ್ ಕೇಂದ್ರ, ಬಯೋಮಿಥನೈಜೇಶನ್ ಪ್ಲಾಂಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲು ಸುಮಾರು 1.20 ಎಕರೆ ಖಾಲಿ ಜಾಗ ಲಭ್ಯವಿದ್ದು, ಕಟ್ಟಡ ನಿರ್ಮಾಣ ಭಗ್ನಾವಶೇಷಗಳ ಸಂಸ್ಕರಣೆ ಮತ್ತು ಬಯೋಮಿಥನೈಜೇಶನ್ ಪ್ಲಾಂಟ್ ನಿರ್ಮಾಣ ಮಾಡುವ ಯೋಜನೆಯಿದೆ. ಈ ಸಂಬಂಧ ಸಮಗ್ರ ಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

369 ವಾರ್ಡ್‌ಗಳಲ್ಲಿಯೂ ಘಟಕ ಸ್ಥಾಪಿಸಿ: ಜಿಬಿಎ ವ್ಯಾಪ್ತಿಯಲ್ಲಿ ಈಗಾಗಲೇ 190 ಸ್ಥಳಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿದ್ದು, ಪ್ರತಿಯೊಂದು ವಾರ್ಡ್‌ಗೆ ಒಂದರಂತೆ 369 ವಾರ್ಡ್‌ಗಳಲ್ಲಿಯೂ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಯಾವ ವಾರ್ಡ್‌ಗಳಲ್ಲಿ ಘಟಕಗಳ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಿದರು.

ಪರಿಶೀಲನೆ ವೇಳೆ ನೀಡಿದ ಇತರೆ ಸೂಚನೆಗಳು: * ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಸುವಿಧಾ ಕ್ಯಾಬಿನ್‌ಗಳನ್ನು ನಿರ್ಮಿಸಬೇಕು. ಜೊತೆಗೆ ಕಣ್ಗಾವಲಿಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಿದರು.

* ಅಂಜನಾಪುರದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಅನಾಥ ವಾಹನಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರನ್ನು ಗುರುತಿಸಿ ಅವರಿಗೆ ದಂಡ ವಿಧಿಸಲು ಸೂಚಿಸಿದರು.

* ಬನಶಂಕರಿ ಮಾರುಕಟ್ಟೆ ಬಳಿ ರಸ್ತೆ ಬ್ಲಾಕ್ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಜೊತೆಗೆ ರಸ್ತೆ ಬದಿಯಲ್ಲೇ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಈ ಸಂಬಂಧ ಜೆ.ಎಚ್‌.ಐ ಮತ್ತು ಮಾರ್ಷಲ್‌ಗಳಿಗೆ ಜವಾಬ್ದಾರಿ ನೀಡಿ ರಸ್ತೆ ಬ್ಲಾಕ್ ಮಾಡದಂತೆ ಹಾಗೂ ಶುಚಿತ್ವ ಕಾಪಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.

* ಗೊಟ್ಟಿಗೆರೆ ಮುಖ್ಯರಸ್ತೆ ಹಾಗೂ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿ ಬಿಳೇಕಹಳ್ಳಿಯಿಂದ ವೇಗಾ ಸಿಟಿ ಮಾಲ್ ವರೆಗೆ ಧೂಳು ಹೆಚ್ಚಿರುವುದನ್ನು ಗಮನಿಸಿ, ಯಾಂತ್ರಿಕೃತ ಕಸ ಗುಡಿಸುವ ಯಂತ್ರಗಳ ಮೂಲಕ ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್, ಜಂಟಿ ಆಯುಕ್ತ ಮಧು ಪಾಟೀಲ್, ಬೆಂ.ಘ.ನಿ.ನಿ.ದ ಸಿಒಒ ರಮಾಮಣಿ, ಡಿಜಿಎಂ, ಎಜಿಎಂಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Deva
the authorDeva

Leave a Reply

error: Content is protected !!