ಬೆಂಗಳೂರು: ಮೂರು, ನಾಲ್ಕು ವರ್ಷಗಳಿಂದ ಡಿಜಿಟಲ್ ವೇದಿಕೆ ಸದೃಢವಾಗಿದೆ. ಈ ಮಾರ್ಗವನ್ನು ಅನುಸರಿಸಿದವರಲ್ಲಿ ನಾನು ಮೊದಲೇನಲ್ಲ, ಏನೇ ಹೊಸ ಹೊಸ ವೇದಿಕೆ ಬಂದಿದ್ದರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಸುಕಾಗುವುದಿಲ್ಲ ಎಂದು ಡಿಜಿಟಲ್ ವೇದಿಕೆಯಲ್ಲಿ ಚಿತ್ರ ಬಿಡುಗಡೆ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ತಮ್ಮ ಒಡೆತನದ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ ‘ಲಾ’ ಸಿನಿಮಾ ಈ ವಾರ ಮತ್ತು ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸಿನಿಮಾ ಮತ್ತು ಚಿತ್ರ ಬಿಡುಗಡೆಯಲ್ಲಿ ಪ್ರಯೋಗ ಮಾಡಲು ಬಯಸುವವರಿಗೆ ಒಟಿಟಿ ಒಂದು ವೇದಿಕೆಯಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಎರಡು ಚಿತ್ರಗಳು ನೇರವಾಗಿ ಬಿಡುಗಡೆಯಾಗಲಿವೆ. ರಘು ಸಮರ್ಥ್ ನಿರ್ದೇಶನದ ‘ಲಾ’ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸಿದರೆ ಪನ್ನಾಗಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಚಿತ್ರದಲ್ಲಿ ಡ್ಯಾನಿಶ್ ಆಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಈ ಎರಡು ಚಿತ್ರಗಳ ಮೂಲಕ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ನಿರ್ಮಾಪಕರಾಗಿದ್ದಾರೆ.
ಈ ಎರಡು ಚಿತ್ರಗಳನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಬೇಕೆಂಬ ಉದ್ದೇಶದಿಂದ ನಿರ್ಮಾಣ ಮಾಡಲಾಯಿತಾದರೂ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಡಿಜಿಟಲ್ ಮಾರ್ಗದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿರುವ ‘ಲಾ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳನ್ನು ಇಡೀ ದೇಶದ ಜನ ವೀಕ್ಷಿಸಲಿದ್ದಾರೆ. ಈ ಎರಡು ಸಿನಿಮಾಗಳ ಬಗೆಗಿನ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇನೆ. ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋಗೆ ಧನ್ಯವಾದಗಳು ಎಂದರು.
ನಮ್ಮ ಬ್ಯಾನರ್ ಅಡಿಯಲ್ಲಿ ಬರುವ ಚಿತ್ರಗಳನ್ನು ಜನ ಮೆಚ್ಚಿಕೊಂಡರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಪುನೀತ್ ರಾಜ್ ಕುಮಾರ್ ತಿಳಿಸಿದರು.
ಇನ್ನು ರಾಗಿಣಿ ಅವರನ್ನು ಮೊದಲ ಬಾರಿಗೆ ಪರಿಚಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಆಕೆಯ ಪತಿ ಪ್ರಜ್ವಲ್ ದೇವರಾಜ್ ನನಗೆ ಉತ್ತಮ ಸ್ನೇಹಿತ. ಅವರ ತಂದೆ ದೇವರಾಜ್‌ಗೆ ಚಿತ್ರೋದ್ಯಮದಲ್ಲಿ ಉತ್ತಮ ಹೆಸರಿದೆ. ಆ ಕುಟುಂಬದಿಂದ ಮತ್ತೊಬ್ಬರನ್ನು ಚಿತ್ರರಂಗಕ್ಕೆ ಪರಿಚಿಯಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಡ್ಯಾನಿಶ್ ಆಲಿ ಕೂಡಾ ಉತ್ತಮ ನಟರಾಗಿದ್ದಾರೆ. ಫ್ರೆಂಚ್ ಬಿರಿಯಾನಿ ರಂಗಾಯಣ ರಘು ಕೂಡಾ ನಟಿಸಿದ್ದಾರೆ ಎಂದರು.