ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವ ವಿದೇಶಿಗರು ವೀಸಾ ನಿಷೇಧಕ್ಕೂ ಮುನ್ನ ಮಾಡುತ್ತಿದ್ದ ಅದೇ ಕೆಲಸಕ್ಕೆ ಮರಳಲು ಕೆಲ ಶರತ್ತುಗಳೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಅವಕಾಶ ನೀಡಿದೆ.
ಪ್ರಾಥಮಿಕ ವೀಸಾ ಬಳಕೆದಾರರ ಜತೆಗೆ ಅಮೆರಿಕಕ್ಕೆ ಪ್ರಯಾಣಿಸಲು ಅವರ ಅವಲಂಬಿತರಿಗೂ (ಹೆಂಡತಿ, ಮಕ್ಕಳು) ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಅದೇ ಕಂಪನಿಯ ಅದೇ ಸ್ಥಾನಕ್ಕೆ ಹಾಗೂ ವೀಸಾ ವರ್ಗೀಕರಣದಂತೆ ಹಳೆಯ ಉದ್ಯೋಗಕ್ಕೆ ವಾಪಸಾಗಲು ಬಯಸಿದ್ದರೆ ಅರ್ಜಿದಾರರ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಎಚ್-1ಬಿ ವೀಸಾ ಹೊಂದಿರುವ ತಾಂತ್ರಿಕ ಪರಿಣತರು, ಉನ್ನತ ಮಟ್ಟದ ವ್ಯವಸ್ಥಾಪಕರು ಮತ್ತು ಇನ್ನಿತರ ಕೆಲಸಗಾರರು ಸಹ, ಪ್ರಯಾಣಿಸಬಹುದು ಎಂದು ಹೇಳಿದೆ.
ಅಮೆರಿಕದ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಅಥವಾ ಆರೋಗ್ಯ ಕಾರ್ಯಕರ್ತರಾಗಿ, ಕೊರೊನಾ ವೈರಸ್ ಸಂಬಂಧಿತ ಸಂಶೋಧನೆಗಳಲ್ಲಿ ಇರುವವರು, ಸಾರ್ವಜನಿಕ ಆರೋಗ್ಯ ಪ್ರಯೋಜನಕ್ಕೆ ಪೂರಕವಾದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವೀಸಾ ಬಳಕೆದಾರರ ಪ್ರಯಾಣಕ್ಕೂ ಟ್ರಂಪ್ ಸರ್ಕಾರ ಅನುಮತಿಸಿದೆ.