ದಾವಣಗೆರೆ: ಬೆಂಗಳೂರು ನಗರದಲ್ಲಿ ಇದೇ ಫೆ.27 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 7ನೇ ವೇತನ ಆಯೋಗದ ಜಾರಿ, ಉಚಿತ ಆರೋಗ್ಯ ಯೋಜನೆ ಘೋಷಣೆ ಮಾಡುವ ಎಲ್ಲಾ ವಿಶ್ವಾಸವಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಫೆ.27 ರಂದು 7ನೇ ವೇತನ ಆಯೋಗದ ಜಾರಿ, ಉಚಿತ ಆರೋಗ್ಯ ಯೋಜನೆ ಘೋಷಣೆ ಮಾಡುವ ಎಲ್ಲಾ ವಿಶ್ವಾಸವಿದೆ. ಹೀಗಾಗಿ ಮಹಾ ಸಮ್ಮೇಳನದಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಸಂಸದರಾದ ಡಾ.ಜಿ.ಎಂ.ಸಿದ್ಧೇಶ್ವರ್ ಮಾತನಾಡಿ, ಒತ್ತಡ ಕಡಿಮೆ ಮಾಡಿಕೊಂಡು ಸದಾ ಲವಲವಿಕೆಯಿಂದಿರಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಾಧ್ಯ ಮತ್ತು ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ನಿರಂತರ ವಿದ್ಯಾಭ್ಯಾಸ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಒತ್ತಡದ ಬದುಕಿನಲ್ಲಿ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ. ಸರ್ಕಾರಿ ನೌಕರರು ಸದಾ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ ಎಂದರು.
ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್. ಐಪಿಎಸ್ ಅಧಿಕಾರಿಗಳಾಗುವರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು.
ಪ್ರಧಾನಿವರು ಖೇಲೋ ಇಂಡಿಯಾ ಕ್ರೀಡೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ಹಿಂದೆ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದರೆಡು ಪದಕ ಬರುವ ವಾತಾವರಣ ಇತ್ತು. ಈಗ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಹೆಚ್ಚಿನ ಕ್ರೀಡಾಪಟುಗಳು ಗೆದ್ದು ಭಾರತದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್‍ಗಾಗಿ ಕೇಂದ್ರ ಸರ್ಕಾರದಿಂದ 8.5 ಕೋಟಿ ರೂಪಾಯಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ ಶಂಕುಸ್ಥಾಪನೆ ಮಾಡಲಾಗುವುದು. ಇಲ್ಲವಾದಲ್ಲಿ ಚುನಾವಣೆ ನಂತರ ಇದಕ್ಕೆ ಚಾಲನೆ ಮಾಡಲಾಗುವುದು ಎಂದು ದಾವಣಗೆರೆ ಸಂಸದರಾದ ಡಾ.ಜಿ.ಎಂ.ಸಿದ್ಧೇಶ್ವರ್ ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ, ಕಾರ್ಯಾಧ್ಯಕ್ಷ ಬಿ.ಪಾಲಾಕ್ಷ, ಉಮೇಶ್, ಮಂಜಮ್ಮ, ಡಾ.ರಂಗನಾಥ್, ಎಚ್.ಬಸವರಾಜ್, ಕೆ.ಎಂ.ಎಚ್.ಸ್ವಾಮಿ, ಬಿ.ಮಂಜುನಾಥ್, ಶಿವಾನಂದ ದಳವಾಯಿ, ಕಲ್ಪನಾ, ತಿಪ್ಪೇಸ್ವಾಮಿ, ರೂಪಾದೇವಿ, ರಾಮಪ್ಪ ಸೇರಿದಂತೆ ಹಲವು ನೌಕರರು ಉಪಸ್ಥಿತರಿದ್ದರು.