ವಿಜಯಪಥ ಸಮಗ್ರ ಸುದ್ದಿ
ರಾಯಚೂರು: ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪಿಗೆ ಗೌರವವಿಲ್ಲದೆ ಮಾತನಾಡಿದ್ದಾರೆ. ಜೊತೆಗೆ ಮಂದಿರ ನಿರ್ಮಾಣದ ಲೆಕ್ಕ ಕೇಳಲು ಅವರು ಯಾರು ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಮಂತ್ರಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೂಲಿ ಮಾಡುವ ಜನ ಹತ್ತು ರೂಪಾಯಿ ನೀಡಿದ್ದಾರೆ. ಅವರು ಲೆಕ್ಕ ಕೇಳಬಹುದು. ಆದರೆ ಹಣ ಕೊಡದಿರುವ ಸಿದ್ದರಾಮಯ್ಯ ಅವರಿಗೆ ಲೆಕ್ಕ ಕೇಳುವ ನೈತಿಕ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಹಣ ನೀಡಿದ್ದಾರೆ ಎಂಬ ಬಸನಗೌಡ ಯತ್ನಾಳ್ ಅವರ ಆರೋಪದ ಬಗ್ಗೆ ನಾನು ಹೇಗೆ ಉತ್ತರಿಸಲಿ. ಇಲ್ಲಿ ಅವರು ಇಲ್ಲ, ಹಣ ಕೊಟ್ಟಿರುವ ಆರೋಪ ಹೊತ್ತಿರುವ ವಿಜಯೇಂದ್ರ ಅವರು ಇಲ್ಲ. ಈ ಸಂದರ್ಭದಲ್ಲಿ ನಾನೇನೂ ಹೇಳಲಾರೆ. ಆದರೆ ಯತ್ನಾಳ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ರಾಷ್ಟ್ರೀಯ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಇನ್ನು ನರೇಗಾ ಯೋಜನೆಯಡಿ ಕೇಂದ್ರ 5600 ಕಿಲೋಮೀಟರ್ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ತಲಾ 4000 ಸಾವಿರ ಕೋಟಿ ರೂ. ಅನುದಾನದಲ್ಲಿ ಆರಂಭಿಸಲಾಗಿದೆ. ಜಲಧಾರೆ ಯೋಜನೆ ಮುಂದುವರಿದಿದೆ ಎಂದು ಇದೇ ವೇಳೆ ತಿಳಿಸಿದರು.
ಇನ್ನೂ ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವ ಕುರಿತು ಸಂಪುಟದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈ ಕುರಿತು ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ವರದಿ ಪಡೆದ ನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.