ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ನಿಲ್ದಾಣದಲ್ಲಿ ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ಡೋರನ್ನೇ ಮುರಿದಿರುವ ಘಟನೆ ಜರುಗಿದೆ.
ಭಾನುವಾರ ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ತಂಡೋಪ ತಂಡವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಶನಿವಾರ ಹೊರಟ್ಟಿದ್ದರು. ಈ ವೇಳೆ ಬಸ್‌ಗಳ ಸಂಖ್ಯೆ ಕಡಿಮೆ ಇದ್ದು ಪ್ರಯಾಣಿಕರು ಹೆಚ್ಚಾಗಿ ಇದ್ದಿದ್ದರಿಂದ ತಾ ಮುಂದು ನಾ ಮುಂದು ಎಂದು ಮಹಿಳೆಯರು ಬಸ್ ಹತ್ತುವಾಗ ಅವರ ರಭಸಕ್ಕೆ ಬಸ್ ಡೋರ್ ಕಿತ್ತು ಬಂದಿದೆ.
ಶಕ್ತಿ ಯೋಜನೆಅಡಿ ರಾಜ್ಯ ಸರ್ಕಾರ ನಾನ್ ಎಸಿ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೂ.11 ರಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಅಂದಿನಿಂದ-ಇಂದಿನವರೆಗೂ ನಾನ್ ಎಸಿ ಬಸ್ಗಳು ಫುಲ್ ರಶ್ ಆಗಿವೆ.
ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರು ದೇಗುಲ ಹಾಗೂ ಇನ್ನಿತರ ಸ್ಥಳಕ್ಕೆ ತೆರಳುತ್ತಿದ್ದು, ಬಸ್ ಫುಲ್ ಆಗಿವೆ. ಹೀಗೆ ರಶ್ ಆದ ಕೊಳ್ಳೇಗಾಲದಲ್ಲಿ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.
ಬೆಳಗ್ಗೆಯಿಂದ ಕಾದರೂ ಕೆಲವರಿಗೆ ರಶ್‌ನಿಂದ ಬಸ್ ಹತ್ತಲು ಆಗಿರಲಿಲ್ಲ. ನಿಲ್ದಾಣದಲ್ಲೇ ಕಾದು ನಿಲ್ಲುವಂತಾಗಿದೆ ಎಂದು ಕೆಲವರು ಗೋಳಾಡಿದ್ದಾರೆ. ಬಸ್‍ಗಳಲ್ಲಿ ಮಹಿಳೆಯರೇ ತುಂಬಿಕೊಳ್ಳುತ್ತಿದ್ದಾರೆ. ನಾವು ಹೇಗೆ ಹೋಗೋದು ಎಂದು ಪುರುಷರು ಅಳಲು ತೋಡಿಕೊಂಡಿದ್ದಾರೆ.
ಮಹದೇಶ್ವರ ಬೆಟ್ಟದತ್ತ ಮಹಿಳೆಯರು ಹೆಚ್ಚಾಗಿ ಹೊರಟಿದ್ದಾರೆ. ಕೊಳ್ಳೇಗಾಲದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಜಿದ್ದಿಗೆ ಬಿದ್ದು ಬಸ್ ಹತ್ತಲು ಹೋಗಿ ಬಾಗಿಲನ್ನೇ ಮುರಿದು ಹಾಕಿದ್ದಾರೆ. ಈ ಘಟನೆಯಿಂದ ಬಸ್ ಕಂಡಕ್ಟರ್ ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿ ನಿಂತುಕೊಂಡಿದ್ದರು.