ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ (61) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಧ್ರುವ ನಾರಾಯಣ್ (62) ಅವರು ಶನಿವಾರ ಹೃದಯಾಘಾತದಿಂದ ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದರು.
ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಕ್ರಿಯವಾಗಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. 2 ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ನಾಡಿನ ಜನತೆಯ ಸೇವೆ ಸಲ್ಲಿಸಿದ್ದಾರೆ.
1983 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಧ್ರುವನಾರಾಯಣ್ 1984 ರಲ್ಲಿ ಜಿಕೆವಿಕೆಯ ಎನ್.ಎಸ್.ಯು.ಐ ಅಧ್ಯಕ್ಷನಾಗಿ ಆಯ್ಕೆಯಾದರು. ನಂತರ 1986 ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು.
1999ರಲ್ಲಿ ಮೊದಲ ಬಾರಿಗೆ ಸಂತೆಮಾರಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆದರೆ 2004 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1 ಮತದ ಅಂತರದ ಗೆಲುವು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದರು.
ಬಳಿಕ 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ನಂತರ 2009 ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆದರೆ ಸೋಲಿನ ಬಳಿಕವೂ ಆ್ಯಕ್ಟೀವ್ ಆಗಿದ್ದರು.
ಧ್ರುವ ನಾರಾಯಣ ಅವರ ಅಕಾಲಿಕ ನಿಧನಕ್ಕೆ ಪಕ್ಷಭೇದ ಮರೆತು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)