ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಸಮಿತಿ ಅವೈಜ್ಞಾನಿಕ ಆದೇಶದ ವಿರುದ್ಧ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ರೈತ ಸಂಘ ಸಂಘಟನೆಗಳ ಒಕ್ಕೂಟ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಕರೆ ನೀಡಿದ ಬೆಂಗಳೂರು ಬಂದ್ ಯಶಸ್ವಿಯಾಗಿದೆ.
ವಿವಿಧ ಸಂಘಟನೆಗಳು ಕರೆ ನೀಡಿದ ಬೆಂಗಳೂರು ಬಂದ್‌ಗೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಿತು. ಇದರ ಜೊತೆಗೆ ನೆನ್ನೆ ಮಧ್ಯರಾತ್ರಿಯಿಂದಲೇ ನಿಷೇಧಜ್ಞಾನೆಯನ್ನು ಜಾರಿಗೊಳಿಸಲಾಗಿತ್ತು.
ಇಂದು ಬೆಳಗ್ಗೆ ಬೆಂಗಳೂರು ನಗರದ ಟೌನ್ ಹಾಲ್ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್ ಮತ್ತು ಅವರ ಬೆಂಬಲಿಗ ಬೆಂಬಲಿಗರು ಮೆರವಣಿಗೆಯಲ್ಲಿ ಪುರಭವನದ ಕಡೆ ಹೊರಟಿದ್ದಾಗ ಪೊಲೀಸರು ವಶಕ್ಕೆ ಪಡೆದು ಬಂಧಿತರನ್ನು ಫ್ರೀಡಂ ಪಾರ್ಕ್‌ಗೆ ಕರೆ ತಂದರು. ಫ್ರೀಡಂ ಪಾರ್ಕ್‌ನಲ್ಲೇ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಂತಕುಮಾರ್, ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರೂ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸೆಗಿದೆ ಎಂದು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
![](https://vijayapatha.in/wp-content/uploads/2023/09/26-Sep-band-1-300x152.jpg)
ನಾವು ಬೆಂಗಳೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡುವುದಾಗಿ ಈ ಮುಂಚೆಯೇ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರತಿಭಟನೆಯನ್ನು ಮಾಡಲು ಪೊಲೀಸರಿಂದ ಅನುಮತಿಯನ್ನು ಪಡೆಯಲಾಗಿದೆ. ಆದರೂ ಕೂಡಾ ಏಕಾಏಕಿ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆಯನ್ನು ಜಾರಿ ಮಾಡಿ ಪ್ರತಿಭಟನೆ ಮಾಡದಂತೆ ತಡೆಯೊಡ್ಡಿದೆ ಎಂದರು.
ಕಾವೇರಿ ಎಂಬುದು ನಮ್ಮ ತಾಯಿ ಇದ್ದಂತೆ ಎಂದು ನಮ್ಮ ಕರ್ನಾಟಕದ ಜನ ಪರಿಗಣಿಸಿದ್ದಾರೆ. ಇಂದಿನ ಬಂದ್ ರಾಜಕೀಯ ಪ್ರೇರಿತ ಬಂದ್ ಅಲ್ಲ, ಜನಸಾಮಾನ್ಯರ ಬಂದ್ ಆಗಿದೆ. ಆದರೆ ಸರ್ಕಾರ ವಾಮಮಾರ್ಗದ ಮೂಲಕ ಪೋಲೀಸರಿಂದ ನಮ್ಮನ್ನು ಬಂಧಿಸಿ, ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಪಟ್ಟಿದ್ದಾರೆ. ಅದರೆ ನಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಅಣೆಕಟ್ಟು ಹೋರಾಟದಲ್ಲಿ ಭಾಗವಹಿಸಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಮೇಕೆದಾಟು ಯೋಜನೆಗೆ ಮುಂದಾಗುವುದಾಗಿ ತಿಳಿಸಿದರು. ಈಗ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜೊತೆಗೆ ಡಿಕೆಶಿ ಅವರೆ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಆದರೂ ಕೂಡಾ ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಾವೇನೂ ನಮ್ಮ ಸ್ವಾರ್ಥಕ್ಕಾಗಿ ಪ್ರತಿಭಟನೆಯನ್ನು ಮಾಡಲು ಬಂದಿಲ್ಲ. ರಾಜ್ಯದ ಜನತೆ ಮತ್ತು ದೇಶದ ಅನ್ನದಾತರ ಪರವಾಗಿ ಹೋರಾಟ ಮಾಡಲು ಬಂದಿದ್ದೇವೆ ಎಂದರು. ಹೋರಾಟಗಾರರ ಕಿಚ್ಚನ್ನು ಅರಿತ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಹೋರಾಟಗಾರರನ್ನು ಕಾನೂನಿನ ನೆಪವೊಡ್ಡಿ ಬಂಧಿಸಿರುವುದು ಅಕ್ಷ್ಯಾಮ ಅಪರಾಧವೆಂದರು.
ನಾನು ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಇಲ್ಲಿಗೆ ಬಂದಿಲ್ಲ, ಒಬ್ಬ ಸಾಮಾನ್ಯ ಪ್ರಜೆಯಾಗಿ ಈ ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಬಂದಿದ್ದೇನೆ ಎಂದರು.
ಸರ್ಕಾರ ಈ ರಾಜ್ಯದ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಲು ಬಿಡುವುದಿಲ್ಲ ಎಂದು ಹೇಳುತ್ತದೆ. ಆದರೆ, ರಾತ್ರೋರಾತ್ರಿ ಕದ್ದು ಮುಚ್ಚಿ ರಾಜ್ಯದ ನೀರನ್ನು ತಮಿಳುನಾಡಿಗೆ ಹರಿಯಲು ಬಿಡುತ್ತದೆ. ಕಾಂಗ್ರೇಸ್ ಮೈತ್ರಿಕೂಟ ರಚಿಸಿಕೊಂಡಿರುವ INDIA ದ ಬಲವರ್ಧನೆಗಾಗಿ ಮತ್ತು ಮುಂಬರುವ ಲೋಕಸಭಾ ಚುನಾವಣಾ ಸಂಬಂಧ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯ ಬಿಡುವುದರ ಮೂಲಕ ತಮಿಳುನಾಡಿನ ಸಂಗ್ಯ ಬೆಳೆಸಲು ಪ್ರಯತ್ನಪಡುತ್ತಿದೆ ಎಂದರು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳಿ ಕೋರ್ಟ್ ಹೆಚ್ಚೆಂದರೆ ಛೀಮಾರಿ ಹಾಕಬಹುದು ಇಲ್ಲವೇ ಜೈಲು ಶಿಕ್ಷೆ ವಿಧಿಸಬಹುದು. ಆಗ ಇಡೀ ಮಂಡಲವೇ ಬೇಕಿದ್ದರೆ ರಾಜ್ಯದ ಜನರ ಹಿತರಕ್ಷಣೆಗಾಗಿ ಸಾಮೂಹಿಕ ರಾಜೀನಾಮೆ ನೀಡಿ ಜೈಲು ಶಿಕ್ಷೆಯನ್ನು ಅನುಭವಿಸಿ. ಇಲ್ಲವೇ ಇಡೀ ಕರ್ನಾಟಕದ ಜನತೆಯೇ ನಿಮ್ಮೊಂದಿಗೆ ಜೈಲಿಗೆ ಬರಲಿ ಸಿದ್ದವಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮಂಡ್ಯ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ ಮಾತನಾಡಿ, ಪ್ರಾಧಿಕಾರದ ತೀರ್ಪಿಗೆ ಅನುಗುಣವಾಗಿ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದೆ. ಈ ಮುಂಚೆ ತಮಿಳುನಾಡಿಗೆ ನೀರು ಹರಿಸಬೇಕಾದ ಸಂದರ್ಭದಲ್ಲಿ ಸರ್ಕಾರದ ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತಿತ್ತು. ಆದರೆ, ಜಲ ಸಂಪನ್ಮೂಲ ಸಚಿವ ಡಿಕೆಶಿ ರವರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ವ್ಯವಹಾರಿಕ ಮೈತ್ರಿಗಾಗಿ ರಾಜ್ಯದ ಜನರ ಹಿತವನ್ನು ಕಾಪಾಡಲು ವಿಫಲರಾಗಿ ಏಕಾಏಕಿ ನೀರನ್ನು ಹರಿಸಿ ರಾಜ್ಯದ ಜನರ ಮರಣ ಶಾಸನ ಬರೆಯಲು ಹೊರಟಿದೆ ಎಂದರು.
ನಂತರ ಮುಖ್ಯಮಂತ್ರಿಗಳ ಪರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರವರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿ, ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಕಾರ್ಯದ ಮೇಲೆ ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ನಿಮ್ಮ ಮನವಿಯನ್ನು ಅವರಿಗೆ ತಿಳಿಸಿ, ನೀವು ವಿಧಿಸಿರುವ ಮೂರು ದಿನಗಳ ಗಡುವಿನ ಒಳಗಾಗಿ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳ ಸಭೆಯನ್ನು ಕರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಜೊತೆಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿ ಇಂದು ಬಂಧಿತರಾಗಿರುವವರನ್ನು ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಲವು ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ರೈತ ಹಿತರಕ್ಷಣ ಸಮಿತಿ ಅಮ್ಮಾದ್ಮಿಪಕ್ಷ , ಸಣ್ಣ ಕೈಗಾರಿಕೆಗಳ ಒಕ್ಕೂಟ ಎಫ್‌ಕೆಸಿಸಿಐ, ಎಪಿಎಂಸಿ ವರ್ತಕರ ಸಂಘ ಕೆ.ಆರ್. ಮಾರ್ಕೆಟ್ ವ್ಯಾಪಾರಸ್ಥರ ಸಂಘ ತರಕಾರಿ ಹೂವು ಮಾರಾಟ ಮಾರುಕಟ್ಟೆ ಸಂಘ, ಜಯಕರ್ನಾಟಕ, ಜಯ ಕರ್ನಾಟಕ ಜನಪರ ವೇದಿಕೆ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಸಮತ ಸೈನಿಕ ದಳ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ನಾರಾಯಣಸ್ವಾಮಿ ನೇತೃತ್ವದ ಕರ್ನಾಟಕ ವಾಹನ ಚಾಲಕರ ಮಾಲೀಕರ ಸಂಘ, ಕರ್ನಾಟಕ ಹಿತರಕ್ಷಣಾ ಸೇನೆ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೆ ಕಾರಣಕರ್ತರಾದರು.
![](https://vijayapatha.in/wp-content/uploads/2024/02/QR-Code-VP-1-1-300x62.png)