NEWSಕೃಷಿನಮ್ಮರಾಜ್ಯ

ಕಾವೇರಿ ಹೋರಾಟದ ಜಾಗೃತಿ ಸಭೆ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಸರ್ವ ಸಂಘಟನೆಗಳ ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಸರ್ವ ಸಂಘಟನೆಗಳು ನಡೆಸಿದ ಕಾವೇರಿ ಹೋರಾಟದ ಜಾಗೃತಿ ಸಭೆಯಲ್ಲಿ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್‌ ಘೋಷಿಸಲಾಗಿದೆ. ಕಾವೇರಿ ನದಿ ಭಾಗದ ಎಲ್ಲ ಜಿಲ್ಲೆಯ ಜನರು ಅಂದಿನ ಬಂದ್‌ ಬೆಂಬಲಿಸುವಂತೆ ಸರ್ವ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ.

ಕುಡಿಯುವ ನೀರಿನ ಅಗತ್ಯತೆ ಅರಿಯದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಅವೈಜ್ಞಾನಿಕ ಆದೇಶ ಖಂಡಿಸಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ಮತ್ತಿತರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಕಾವೇರಿ ಹೋರಾಟದ ಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಕ್ಷದ ರಾಜ್ಯಾಧಕ್ಷ ಮುಖ್ಯಮಂತ್ರಿ ಚಂದ್ರು, ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೀರಲ್ಲ ಏನು ಕಡಿದು ಕಟ್ಟೆ ಹಾಕಿದ್ದೀರಾ, ಮೇಕೆದಾಟು ಯೋಜನೆ ಯಾಕೆ ಪ್ರಾರಂಭಿಸಿಲ್ಲ, ಇದರ ಬದಲಾಗಿ ನೀವು ಎಲ್ಲಿದ್ದೀರಿ ಎಂದು ನಮಗೆ ಪ್ರಶ್ನೆ ಮಾಡ್ತೀರಾ? ಅಧಿವೇಶನ ಕರೆದು ನೀರು ಬಿಡಲ್ಲ ಎಂದು ನಿರ್ಣಯ ಮಾಡಿ, ಸುಪ್ರೀಂಕೋರ್ಟ್‌ಗೂ ವಿಚಾರ ತಿಳಿಸಿ, ಕೋರ್ಟ್ ಛೀಮಾರಿ ಹಾಕಬಹುದು, ಜೈಲಿಗೆ ಹಾಕಬಹುದು, ಏನೇನಕ್ಕೋ ಜೈಲಿಗೆ ಹೋಗ್ತಿರಾ ರಾಜ್ಯದ ಹಿತಕ್ಕಾಗಿ ಜೈಲಿಗೆ ಹೋಗಲು ಆಗಲ್ಲವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ನಾಡು, ನುಡಿ, ಜನ ರಕ್ಷಣೆ ಬಂದಾಗ ಆಮ್ ಆದ್ಮಿ ಪಕ್ಷ ಬೇಧಬಾವ ಇಲ್ಲದೆ ಹೋರಾಟ ಮಾಡುತ್ತದೆ. ಒಂದು ಕೋಟಿಗೂ ಹೆಚ್ಚು ಜನ ಬೆಂಗಳೂರಿನಲ್ಲಿದ್ದು, ಬೆಂಗಳೂರಿಗೆ 1450 ಎಂಎಲ್‌ಡಿ ನೀರು ಬೇಕು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 150 ಲೀಟರ್ ನೀರು ಬೇಕು. ಆದರೆ, ಈಗ 108 ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ತಮಿಳುನಾಡಿಗೆ ನೀರು ಬಿಟ್ಟರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆಯಾಗಲಿದೆ. ಇಷ್ಟು ವರ್ಷ ಅಧಿಕಾರ ನಡೆಸಿದ ಮೂರು ಪಕ್ಷಗಳು, ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ. ನಿಮಗೆ ನಾಡಿನ ಹಿತ ಕಾಪಾಡುವ ಬದ್ಧತೆ ಇಲ್ಲವಾ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಜನ ಹೋರಾಟ ಮಾಡಲಿ: ಬೆಂಗಳೂರಿನಲ್ಲಿ 1.30 ಲಕ್ಷ ಜನ ಇದ್ದು, ಇದರಲ್ಲಿ 65 ಲಕ್ಷ ಜನ ಬೇರೆ ಭಾಷಿಕರು ಇದ್ದಾರೆ. ಅವರಿಗೂ ಕುಡಿಯುವ ನೀರಿನ ಅವಶ್ಯಕತೆ ಇದೆ. 45 ದಿನಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ಬೆಂಗಳೂರಿನ ಜನ ಮಲಗಿದ್ದಾರೆ. ಇದು ಸರಿಯಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಯಾವುದೇ ಭಾಷಿಕರು ಆದರೂ ಕುಡಿಯಲು, ಬಳಸಲು ನೀರು ಮುಖ್ಯ ಆದ್ದರಿಂದ ಎಲ್ಲರೂ ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜನರ ಬದುಕು ಮುಖ್ಯ, ಯಾವುದೇ ಆದೇಶ ಏನೂ ಮಾಡಲು ಆಗಲ್ಲ. ಕುಡಿಯುವ ನೀರಿಗೆ ಆದ್ಯತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದರು.

ಸಹಿ ಸಂಗ್ರಹ ಚಳುವಳಿ: ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬೆಂಗಳೂರಿನ ಜನ ಬೀದಿಗಿಳಿಯುವುದು ಕಷ್ಟ ಎನ್ನಲಾಗುತ್ತದೆ. ಆದರೆ ಸ್ಟೀಲ್ ಫ್ಲೈ ಓವರ್ ವಿಚಾರದಲ್ಲಿ ಬೆಂಗಳೂರಿಗರು ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡಿದ್ದರು, ಅಂತಹ ಕೆಲಸ ಮತ್ತೆ ಆಗಬೇಕು. ಮಾತ್ರವಲ್ಲದೆ ನಾವೇ ಜನರ ಬಳಿ ಹೋಗಿ ಸಹಿ ಸಂಗ್ರಹಣೆ ಮಾಡಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಎಎಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಬಯಲು ಸೀಮೆಯ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮಾತನಾಡಿ, ನಮ್ಮ ದೇಶದ ಕಾನೂನು ಕುಡಿಯುವ ನೀರಿಗೆ ಮೊದಲ ಆದ್ಯತೆ, ಇದಾದ ಬಳಿಕ ಕೃಷಿ, ಕೈಗಾರಿಕೆ ಬಳಕೆಗೆ ಎಂದು ಹೇಳುತ್ತದೆ. ಪ್ರಸ್ತುತ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೂ ಕೂಡ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡಲು ಸಾಧ್ಯವಿಲ್ಲ ಎಂದರು.

ಇನ್ನು ಇದಕ್ಕಾಗಿ ನಾವು ಹೋರಾಟ ಮಾಡಬೇಕು. ಕಾವೇರಿ ಹೋರಾಟಕ್ಕೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿ ಅವರನ್ನು ಚಳವಳಿಗೆ ಧುಮುಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ನಗರದ ರಾಜಸ್ತಾನಿ ವ್ಯಾಪಾರಸ್ಥರ ಪರವಾಗಿ ವಿಜಯಸಿಂಗ್ ಮಾತನಾಡಿ, ನಾವು ಈ ರಾಜ್ಯದ ನೀರು ಕುಡಿದು ಬದುಕುತ್ತಿದ್ದೇವೆ. ನೀವು ಹೋರಾಟಗಾರರು ಮಾಡೋ ಹೋರಾಟಕ್ಕೆ ನಾವು ಕೈ ಜೋಡಿಸುವ ಮೂಲಕ ಈ ರಾಜ್ಯದ ಋಣ ತೀರಿಸಲು ಬದ್ಧರಾಗಿದ್ದೇವೆ ಎಂದರು.

ಕನ್ನಡ ಪರ ಹೋರಾಟಗಾರ ವಿಜಯಕುಮಾರ್ ಮಾತನಾಡಿ, ನಾವು ಈಗಾಗಲೇ ಕನ್ನಡ ನಾಡು ನುಡಿಗಾಗಿ ಹೋರಾಟವನ್ನು ಮಾಡಿದ್ದೇವೆ. ಈಗ ಕಾವೇರಿ ನೀರಿಗಾಗಿ ಕೂಡ ಹೋರಾಟ ಮಾಡೊಣ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೈ ಜೋಡಿಸೊಣ ಎಂದು ಕರೆ ನೀಡಿದರು.

ಕರ್ನಾಟಕ ತಮಿಳು ಭಾಷೆ ಸಂಘದ ಅಧ್ಯಕ್ಷ ಮುತ್ತುಮಣಿ ಮಾತನಾಡಿ, ನಾವು ಈ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ತಮಿಳು ಜನರು ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ಪರವಾಗಿದ್ದೇವೆ ಎಂದು ಘೋಷಿಸಿದರು.

ಕೋಲಾರದ ಮಾಜಿ ಸಂಸದ ವೆಂಕಟೇಶ್ ಮಾತನಾಡಿ, ಕೇಂದ್ರದಲ್ಲಿ ನಮ್ಮ ರಾಜ್ಯದ ಸಂಸದರೇ ರೈಲ್ವೆ ಮಂತ್ರಿಯಾಗಿದ್ದರೂ ರಾಜ್ಯಕ್ಕೆ ಸರಿಯಾಗಿ ರೈಲು ವ್ಯವಸ್ಥೆ ಮಾಡಿರಲಿಲ್ಲ. ಆಗ ನಾನು ಹೋರಾಟ ನಡೆಸಿ ರೈಲ್ವೆ ವ್ಯವಸ್ಥೆಗೆ ಶ್ರಮಿಸಿದೆ. ಈಗಲೂ ಕೂಡ ಕಾವೇರಿ ನೀರಿನ ವಿಚಾರದಲ್ಲೂ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.

ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ ಮಾತನಾಡಿ, ನಾವು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ತನಕ ಹೋರಾಟ ಮಾಡಿದಾಗ ಸ್ವತಃ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನಮ್ಮ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲು ಬರುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಘಟನೆಗಳ ಮುಖಂಡರು ಕಾವೇರಿ ನೀರಿನ ಹೋರಾಟದ ಬಗ್ಗೆ ತಮ್ಮ ಸಲಹೆ, ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಕನ್ನಡ ಚಳವಳಿ ನಾಯಕ ಗುರುದೇವ್ ನಾರಾಯಣ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು