ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿರುವ ಚಲನಚಿತ್ರ ಪೋಷಕ ಕಲಾವಿದರಿಗೆ ಲಗ್ಗೆರೆ ವಾರ್ಡ್ ಮಹಾನಗರ ಪಾಲಿಗೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಪಡಿತರ ಕಿಟ್ ವಿತರಿಸಿದರು.
ಬುಧವಾರ ಪತಿ ನಾರಾಯಣ ಸ್ವಾಮಿ ಜತೆಯಲ್ಲಿ 250 ಜನ ಸಿನಿಮಾ ಕಲಾವಿದರಿಗೆ ಪಡಿತರ ಕಿಟ್ ನೀಡುವ ಮೂಲಕ ಕಲಾವಿದರು ಮತ್ತು ಅವರ ಬದುಕನ್ನು ಗೌರವಿಸಿದ್ದಾರೆ.
ಹಿರಿಯ ಪೋಷಕ ಕಲಾವಿದ ಕಿಲ್ಲರ್ ವೆಂಕಟೇಶ್ ಆರ್ಥಿಕ ಸಂಷ್ಟದಲ್ಲಿರುವುದನ್ನು ಅರಿತ ಮಂಜುಳಾ ಅವರು ಜೀವಿತಾವಧಿಯ ತನಕ ಮಾಸಿಕ ಹತ್ತು ಸಾವಿರ ರುಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಅದರಂತೆ ಹಣ ತಲುಪುವ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಈಗ ಇತರೆ ಕಲಾವಿದರ ನೋವಿಗೂ ಮಿಡಿಯುತ್ತಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶೃತಿ, ರಾಗಿಣಿ, ಸಾ.ರಾ ಗೋವಿಂದು ಮತ್ತು ಮುನಿರತ್ನ ಪೋಷಕ ಕಲಾವಿದರಿಗೆ ಆಹಾರದ ಕಿಟ್ ವಿತರಿಸಿದರು.
ತಲಾ ಮೂವತ್ತು ಕೆ.ಜಿ.ಯ ಈ ಕಿಟ್ ದಿನನಿತ್ಯದ ಬಳಕೆಯ ಅಡುಗೆ ಪದಾರ್ಥಗಳನ್ನು ಒಳಗೊಂಡಿದೆ. ಈಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೋಕ್, ಸಿನಿಮಾ ಕಾರ್ಮಿಕರಿಗೆ ನಾರಾಯಣಸ್ವಾಮಿ ದಂಪತಿ ನೆರವಾಗಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಹೀಗೆ ಕಷ್ಟದಲ್ಲಿ ಇರುವ ಮತ್ತಷ್ಟು ಸಮುದಾಯಗಳಿಗೆ ಸಹಾಯ ಮಾಡಲು ಕೇಳಿಕೊಂಡಿದ್ದೇನೆ ಎಂದರು.
![](https://vijayapatha.in/wp-content/uploads/2020/04/22-Apl-Cinema-Artist1-300x180.jpeg)
ಶೃತಿ ಮಾತನಾಡುತ್ತಾ, “ಜನ ನಾಯಕರಾಗಿದ್ದುಕೊಂಡು ಸಿನಿಮಾ ಕಲಾವಿದರ ಸಮಸ್ಯೆಗೆ ಸ್ಪಂದಿಸಿರುವ ಮಂಜುಳಾ ಮತ್ತು ನಾರಾಯಣಸ್ವಾಮಿ ಅವರ ನಡೆ ಮಾದರಿಯಾಗಿದೆ. ಇವರು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಹೊಂದಲಿ” ಎಂದು ನುಡಿದರು.
ಲಗ್ಗೆರೆ ವಾರ್ಡ್ನಲ್ಲಿ ದುಡಿಯುವ, ಶ್ರಮಿಕ ವರ್ಗದ ಜನ ಹೆಚ್ಚು ವಾಸಿಸುತ್ತಾ ಬಂದಿದ್ದಾರೆ. ಅದರಲ್ಲೂ ದಿನಗೂಲಿ, ಕಟ್ಟಡ ಕಾರ್ಮಿಕರು, ಚಲನಚಿತ್ರ ಕಾರ್ಮಿಕರು ಇಲ್ಲಿ ಬದುಕು ನಡೆಸುತ್ತಿದ್ದಾರೆ. ಇವರಿಗೆ ಬೇರೆಲ್ಲರಂತೆ ಪ್ಯಾಕೆಟ್ ಆಹಾರ ನೀಡದೆ, ಒಂದು ಕಡೆ ಅನ್ನ ಮತ್ತು ಸಾಂಬಾರು ತಯಾರಿಸಿ, ಹತ್ತು ಮೊಬೈಲ್ ಕ್ಯಾಂಟೀನ್ ವಾಹನಗಳಲ್ಲಿ, ಹತ್ತು ಜಾಗಗಳಲ್ಲಿ ತಲುಪಿಸಿ, ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಕೇಳಿ ಆಹಾರ ವಿತರಿಸುತ್ತಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)
ಇವರು ಸಿನಿಮಾ ರಂಗದ ಬಡವರಿಗೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.
ಕಲಾವಿದರು, ಬಡವರ್ಗದ ಜನರ ಬಗ್ಗೆ ನಿಮ್ಮ ಕಾಳಜಿ ವರ್ಣನೆಗೆ ನಿಲುಕದ್ದು ನಿಮ್ಮ ಈ ಸೇವಾ ಕಾರ್ಯ ನಿರಂತರವಾಗಿ ಸಾಗಲಿ ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ ಹಸಿವು ನೀಗಿಸಿಕೊಳ್ಳಲಿ. ನಿಮ್ಮ ಕಾಯಕಕ್ಕೆ ನನ್ನದೊಂದು ಅಭಿನಂದನೆ