NEWSನಮ್ಮಜಿಲ್ಲೆಬೆಂಗಳೂರು

ಜನರೇ ನಮ್ಮ ಪಾಲಿನ ದೇವರು, ಅವರ ಸೇವೆಗೆ ಸದಾ ಬದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜನರೇ ನಮ್ಮ ಪಾಲಿನ ದೇವರು. ಜನರ ಸಮಸ್ಯೆ ಸರ್ಕಾರದ ಸಮಸ್ಯೆ, ಜನರ ಪರಿಹಾರವೇ ರಾಜ್ಯದ ಪರಿಹಾರ. ಜನರ ಸೇವೆಗೆ ನಾವು ಸದಾ ಬದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಯಲಹಂಕದಲ್ಲಿ ಶುಕ್ರವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಲ್ಲಿಗೆ ನಾನೊಬ್ಬನೇ ಬಂದಿಲ್ಲ. ಪೊಲೀಸ್ ಸೇರಿದಂತೆ ಸುಮಾರು 300 ಅಧಿಕಾರಿಗಳು ನಿಮ್ಮ ಸೇವೆಗೆ ಬಂದಿದ್ದೇವೆ. ನೀವು ನಮಗೆ ಅಧಿಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.

ಇನ್ನು ಋಣ ತೀರಿಸುವ ವಿಚಾರದಲ್ಲಿ ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ತಂದೆ ತಾಯಿ, ದೇವರು, ಗುರುಗಳು ಹಾಗೂ ಸಮಾಜ ಈ ನಾಲ್ಕು ಋಣವನ್ನು ನಾವು ತೀರಿಸಬೇಕಂತೆ. ಇವರ ಋಣವನ್ನು ಧರ್ಮದಿಂದ ತೀರಿಸಬೇಕು ಎಂದು ತಿಳಿಸಿದರು.

ಇನ್ನು ಈ ಹಿಂದೆ ಅನೇಕರು ಬೆಂಗಳೂರಿನ ಮಂತ್ರಿಯಾಗಿ ಅವರ ಶೈಲಿಯಲ್ಲಿ ಕೆಲಸ ಮಾಡಿದ್ದಾರೆ. ನಾನು 35 ವರ್ಷಗಳ ಹಿಂದೆ ಶಾಸಕನಾದಾಗ ಪ್ರತಿ ವರ್ಷ ಪ್ರತಿ ಹಳ್ಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಕಷ್ಟ ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಅದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂದರು.

ಪ್ರತಿನಿತ್ಯ ಜನ ನಮ್ಮ ಮನೆ ಬಾಗಿಲಿಗೆ ತಮ್ಮ ಸಮಸ್ಯೆ ಹೊತ್ತುಕೊಂಡು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿಗಳು ಜನಸ್ಪಂದನ ಕಾರ್ಯಕ್ರಮ ಮಾಡಿ, ಎಲ್ಲ ಸಚಿವರಿಗೂ ಸೂಚನೆ ನೀಡಿದ್ದಾರೆ. ನಾನೂ ನನ್ನ ಕ್ಷೇತ್ರ ಹಾಗೂ ಆನೇಕಲ್ ನಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದೇನೆ. ಜನ ತಮ್ಮ ಆಸ್ತಿಗಳ ಖಾತೆ ವಿಚಾರ, ಪಿಂಚಣಿ ಸೇರಿದಂತೆ ಸರ್ಕಾರದ ಸವಲತ್ತುಗಳ ಸಮಸ್ಯೆ ಹೊತ್ತು ತರುತ್ತಾರೆ ಎಂದು ತಿಳಿಸಿದರು.

ಇನ್ನು ಅಧಿಕಾರಿಗಳು ಗೌರವ ನೀಡದಿದ್ದಾಗ ಜನ ರಾಜಕಾರಣಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಲಂಚ ಕೇಳಿ ಹಿಂಸೆ ಕೊಟ್ಟಾಗ ಜನ ನಮ್ಮತ್ತ ಬರುತ್ತಾರೆ. ಇಂತಹ ದೂರುಗಳು ಹೆಚ್ಚುತ್ತಿವೆ. ಇವುಗಳನ್ನು ತಪ್ಪಿಸಬೇಕು. ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ನೀಡಿ. ಯಾರೇ ಆಗಲಿ ನನ್ನ ಹೆಸರು, ಕೃಷ್ಣ ಬೈರೇಗೌಡ, ವಿಶ್ವನಾಥ್, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಯಾರ ಹೆಸರಲ್ಲಿ ಹಣ ಕೇಳಿದರೂ ನಮ್ಮ ಗಮನಕ್ಕೆ ತನ್ನಿ, ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೆ.ಆರ್.ಪುರದ ಕಾರ್ಯಕ್ರಮದಲ್ಲಿ ನಾನೇ ಇಂತಹ ಹತ್ತು ಪ್ರಕರಣಗಳನ್ನು ನೋಡಿದ್ದೇನೆ. ಇದನ್ನು ಬಗೆಹರಿಸಿ ಅವರಿಗೆ ಹಣ ಮರಳಿಸಲಾಗಿದೆ. ಈ ಮಧ್ಯೆ ವಿಶ್ವನಾಥ್ ಅವರು ಅನುದಾನದ ವಿಚಾರ ಪ್ರಸ್ತಾಪ ಮಾಡಿದರು. ಮುಂದಿನ ದಿನಗಳಲ್ಲಿ ಇದನ್ನು ಬಗೆಹರಿಸಲಾಗುವುದು. ಬೆಂಗಳೂರಿನಲ್ಲಿ ಸ್ವಯಂ ತೆರಿಗೆ ವ್ಯವಸ್ಥೆಯಲ್ಲಿ ಆಸ್ತಿಗೆ ಸರಿಯಾದ ಲೆಕ್ಕದಲ್ಲಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾವು ಸಮೀಕ್ಷೆ ಮಾಡುತ್ತಿದ್ದೇವೆ ಎಂದರು.

ತೆರಿಗೆ ಪಾವತಿ ಮಾಡದಿದ್ದರೆ ರಸ್ತೆ ಮಾಡುವುದು, ನೀರು ನೀಡುವುದು ಹೇಗೆ? ಬೆಂಗಳೂರಿನಲ್ಲಿ 1.40 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಇವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಹೆಬ್ಬಾಳ ಹಾಗೂ ಯಲಹಂಕ ನಂತರ ಕುಡಿಯುವ ನೀರು ಪೂರೈಸಬಾರದು ಎಂದು ಸಹಿ ಹಾಕಿಸಿದ್ದರು.

ಮೊನ್ನೆಯಷ್ಟೇ ಕುಡಿಯುವ ಉದ್ದೇಶಕ್ಕೆ 6 ಟಿಎಂಸಿ ನೀರನ್ನು ಪೂರೈಸಲು ನಿರ್ದೇಶನ ನೀಡಲಾಗಿದೆ. ಇನ್ನು ಒಂದೂವರೆ ಟಿಎಂಸಿ ನೀರು ಬಾಕಿ ಇದೆ. ಎತ್ತಿನಹೊಳೆ ನೀರು ಪೂರೈಕೆ, ಅಂತರ್ಜಲ ನೀರಿನ ಸದ್ಬಳಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ಬೆಂಗಳೂರಿನಲ್ಲಿ ಕಸದ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಾರೆ. ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಹೋಗುತ್ತಾರೆ. ಇದನ್ನು ತಡೆಗಟ್ಟಿ ಬೆಂಗಳೂರಿನ ಸ್ವಚ್ಛತೆ ಕಾಪಾಡಲು ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಈ ರೀತಿ ಕಸ ಸುರಿಯುವವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದರು.

ಬೆಂಗಳೂರು ಯೋಜಿತ ನಗರವಲ್ಲ. ಹಿಂದೆ ಕೆಂಪೇಗೌಡರು ನಾಲ್ಕು ಸ್ತಂಭಗಳನ್ನು ಅಳವಡಿಸಿ ನಗರ ನಿರ್ಮಾಣ ಮಾಡಿದ್ದರು. ಆದರೆ ಈಗ ಅದು ಐದಾರು ಪಟ್ಟು ವಿಸ್ತೀರ್ಣವಾಗಿದೆ. ಇಲ್ಲಿರುವ ಹವಾಮಾನ, ಶಿಕ್ಷಣ, ಆರೋಗ್ಯ ಸೌಲಭ್ಯದಿಂದ ಬೆಂಗಳೂರಿಗೆ ಬಂದವರು ವಾಪಸ್ ಹೋಗುವುದಿಲ್ಲ. ಹೀಗಾಗಿ ಬೆಂಗಳೂರಿನ ನಿರ್ವಹಣೆ ಬಹಳ ಮುಖ್ಯ.

ಇಂದು ಇಲ್ಲಿ ಅಹವಾಲು ತರುವ ಜನರಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುತ್ತೇವೆ. ಒಂದು ವೇಳೆ ಪರಿಹಾರ ನೀಡಲು ಆಗದಿದ್ದರೆ, ಯಾವ ಕಾರಣಕ್ಕೆ ಪರಿಹಾರ ನೀಡಲು ಆಗುವುದಿಲ್ಲ ಎಂಬ ಕಾರಣವನ್ನು ತಿಳಿಸುತ್ತೇವೆ ಎಂದರು.

ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮೇಲೆ ಜನರ ಸೇವೆಯೇ ಜನಾರ್ದನನ ಸೇವೆ ಎಂದು ಹೇಳುತ್ತಾರೆ. ನಾವು ನಿಮ್ಮನ್ನು ದೇವರಂತೆ ಕಂಡು ನಿಮ್ಮ ಸೇವೆ ಮಾಡುತ್ತೇವೆ. ಅದಕ್ಕಾಗಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಟಿ ಆಯಿತು. ಐದು ಗ್ಯಾರಂಟಿ ಯೋಜನೆಯಿಂದ ಜನರ ಕೈ ಗಟ್ಟಿಯಾಯಿತು. ನಿಮ್ಮ ಕೈ ಬಲಪಡಿಸಲು ನಾವು ಈ ಯೋಜನೆ ಕೊಟ್ಟು ಸೇವೆ ಮಾಡುತ್ತಿದ್ದೇವೆ ಎಂದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು