NEWSನಮ್ಮಜಿಲ್ಲೆನಮ್ಮರಾಜ್ಯ

ದೊಡ್ಡದಿರಲಿ, ಸಣ್ಣದಿರಲಿ ಪತ್ರಿಕೆ ನಡೆಸುವುದು ಬಿಳಿ ಆನೆ ಸಾಕಿದಂತೆಯೇ ಸರಿ : ಸಾಹಿತಿ ಬನ್ನೂರು ರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಯಾವುದೋ ಒಂದು ಪತ್ರಿಕೆಯಲ್ಲಿ ಸಂಪಾದಕರೋ, ಉಪ ಸಂಪಾದಕರೋ, ವರದಿಗಾರರೋ ಆಗಿ ಹೇಗೋ ಕೆಲಸ ಮಾಡಬಹುದು ಆದರೆ ಸ್ವತಃ ಒಂದು ಪತ್ರಿಕೆಯನ್ನು ನಡೆಸುವುದು ಅಷ್ಟು ಸುಲಭವಲ್ಲ. ಇದೊಂದು ಬಿಳಿ ಆನೆ ಸಾಕಿದಂತೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಶ್ರೀಹರ್ಷ ರಸ್ತೆಯಲ್ಲಿರುವ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕನ್ನಡಿಗರ ಭುವನ ಸಂಗಾತಿ’ ಪತ್ರಿಕೆಯ 23 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೆ ಎಂಬುದು ಬಿಳಿ ಆನೆ ಇದ್ದಂತೆ. ಒಂದು ಪಕ್ಷ ಬಿಳಿ ಆನೆಯನ್ನಾದರೂ ಬೇಕಾದರೆ ಸಾಕಬಹುದು, ಆದರೆ ಅದು ದೊಡ್ಡ ಪತ್ರಿಕೆಯಾಗಿರಲಿ ಅಥವಾ ಸಣ್ಣ ಪತ್ರಿಕೆಯಾಗಿರಲಿ ಒಟ್ಟಾರೆ ಒಂದು ಪತ್ರಿಕೆಯನ್ನು ಸಾಕಿ, ನಡೆಸಿ, ಉಳಿಸಿ ಕೊಳ್ಳುವುದು ಸುಲಭದ ಕೆಲಸವಲ್ಲವೆಂದರು.

ಪತ್ರಿಕಾ ರಂಗವನ್ನು ನಾವು ನೋಡುವುದಾದರೆ ಇದು ಇವತ್ತಿನ ಕಷ್ಟವಲ್ಲ. ಪತ್ರಿಕೆಗಳ ಹುಟ್ಟಿನಿಂದಲೂ ಇದ್ದಿದ್ದೇ. ಇಂತಹ ಕಷ್ಟಕರವಾದ ಕೆಲಸವನ್ನು ಇಷ್ಟವಾಗಿಸಿ ಕೊಂಡು ಈ ದಿಶೆಯಲ್ಲಿ ಕಪ್ಪು ಸುಂದರಿಯಾಗಿ ವಿಶೇಷವಾಗಿ ಶೋಷಿತರ ಮೆಚ್ಚುಗೆ ಗಳಿಸಿರುವ ‘ಭುವನ ಸಂಗಾತಿ’ ಪತ್ರಿಕೆಯನ್ನು ಕಳೆದ 22 ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸೋಮಯ್ಯ ಮಲೆಯೂರು ನಿಜಕ್ಕೂ ಸಾಹಸಿಗರೇ ಸರಿ.

ಇಂತಹ ಸಾಹಸದ ಹಿಂದೆ ಬಾಬಾ ಸಾಹೇಬರ ತತ್ವಾದರ್ಶದ ಶಕ್ತಿಯಿದೆ. ಇಂದಿನ ಪತ್ರಕರ್ತರು, ಪತ್ರಿಕೋದ್ಯಮಿಗಳು ಪತ್ರಕರ್ತರಾಗಿ ಅಂಬೇಡ್ಕರರನ್ನು ಅರಿಯಬೇಕೆಂದು ಹೇಳಿದ ಅವರು ಪತ್ರಿಕೋಧ್ಯಮದ ಶುದ್ಧೀಕರಣಕ್ಕೆ ಪ್ರತಿಯೊಬ್ಬರೂ ಧ್ವನಿಯಾಗಬೇಕೆಂದರು.

ಇದಕ್ಕೂ ಮುನ್ನ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಗಾಂಧಿನಗರದ ಶ್ರೀ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷರಾದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅವರು, ಇವತ್ತು ದೇಶದಲ್ಲಿ ಅಪರಾಧಿಗಳು ಕಾನೂನು ಜಾರಿ ಮಾಡುತ್ತಿದ್ದಾರೆ. ಪ್ರಶ್ನಿಸಬೇಕಾದ ಮಾಧ್ಯಮಗಳು ಮೌನವಾಗಿವೆ. ಇದು ನಮ್ಮ ಸಮಾಜದ ಪ್ರತ್ಯಕ್ಷ ದರ್ಶನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಪತ್ರಿಕೆಗಳು ಸಮಾಜದ ಮುಖವಾಣಿ ಆಗಬೇಕು. ನಮ್ಮ ಸಮಾಜದ ಬೇಕು ಬೇಡಗಳನ್ನು ಪ್ರತಿನಿಧಿಸುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆದರೆ ಮೌನಕ್ಕೆ ಜಾರಿ ಸತ್ಯವನ್ನು ಮುಚ್ಚಿಡುವ ಕೆಲಸ ಮಾಡುತ್ತಿವೆ. ತಾಯಿ ಭಾರತಾಂಬೆಯನ್ನು ಪ್ರತಿನಿಧಿಸುವ ಮಹಿಳೆಯರನ್ನು ನಮ್ಮದೇ ನೆಲ ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಮಾಡಿದರೂ ಉಸಿರೆತ್ತದ ಮಾಧ್ಯಮಗಳು ನಮ್ಮಲ್ಲಿವೆ ಎಂದು ಆರೋಪಿಸಿದರು.

ಚಿಂತಕ ಹಾಗೂ ಮೈಸೂರು ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅಧ್ಯಕ್ಷರೂ ಆದ ಪ್ರೊ.ಡಿ.ಆನಂದ್ ಮಾತನಾಡಿ, ನಮ್ಮ ಭಾರತದಲ್ಲಿನ ಹೆಚ್ಚಿನ ಮಾಧ್ಯಮಗಳ ಕೆಲಸ ಆಡಳಿತದಲ್ಲಿರುವವರ ಪರ ತುತ್ತೂರಿ ಊದುವುದು, ಡಂಗುರ ಬಾರಿಸುವುದು,ತಮಟೆ ಹೊಡೆಯುವುದಾಗಿದೆ. ಇದಕ್ಕೆ ಬಹುಪಾಲು ಕಾರಣ ಮಾದ್ಯಮವು ಹಣ ಮತ್ತು ಇತರೆ ಆಮಿಷಗಳ ಹಿಂದೆ ಬಿದ್ದಿರುವುದು ಹಾಗೂ ಮೌಲ್ಯದ ಕೊರತೆಯೂ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕ ವ್ಯವಸ್ಥೆ ಸುಧಾರಿಸುವಲ್ಲಿ ದೂರ ದೃಷ್ಟಿಯ ಯೋಜನೆಗಳು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಿ ಯೋಚಿಸಬೇಕಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಮಾತನಾಡಿದರು. ಭುವನ ಸಂಗಾತಿ ಪತ್ರಿಕೆಯ ಸಂಪಾದಕ ಸೋಮಯ್ಯ ಮಲೆಯೂರು, ಪತ್ರಕರ್ತ ರಾ.ಸುರೇಶ, ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅಮ್ಮ ರಾಮಚಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು