ನಂಜನಗೂಡು: ರೈತ ಮಹಿಳೆಯೊಬ್ಬರು ತಮ್ಮ ಜಮೀನಿನಲ್ಲಿ ಅವರೆಕಾಯಿ ಕೊಯ್ಯುವಾಗ ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರದ ಗೊದ್ದನಪುರ ಗ್ರಾಮದಲ್ಲಿ ನಡೆದಿದೆ.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಗೊದ್ದನಪುರ ಗ್ರಾಮದ ನಿವಾಸಿ ಸ್ವಾಮಿ ಎಂಬುವರ ಪತ್ನಿ ಜಯಲಕ್ಷ್ಮೀ(42) ಮೃತ ದುರ್ದೈವಿ. ಇವರು ತಮ್ಮ ಜಮೀನಿನಲ್ಲಿ ಅವರೆಕಾಯಿಯನ್ನು ಬೆಳೆದಿದ್ದು ಅದನ್ನು ಕೊಯ್ಯಲೆಂದು ಪತಿ ಮತ್ತು ಮಕ್ಕಳೊಂದಿಗೆ ಭಾನುವಾರ ತೆರಳಿದ್ದರು.
ಮಧ್ಯಾಹ್ನದ ವೇಳೆಗೆ ಜಮೀನಿನಲ್ಲಿ ಅವರೆಕಾಯಿಯನ್ನು ಕೊಯ್ಯುತ್ತಿರುವಾಗಲೇ ಅವರೆ ಬೆಳೆಯ ನಡುವೆಯಿದ್ದ ಹಾವು ಕಚ್ಚಿದೆ. ತಕ್ಷಣ ಅವರು ಜೋರಾಗಿ ಕಿರುಚುತ್ತಾ ಹಾವು ಕಚ್ಚಿರುವುದಾಗಿ ಹೇಳಿದ್ದಾರೆ.
ಕೂಡಲೇ ಅವರನ್ನು ಜಮೀನಿಂದ ಪತಿ ಸ್ವಾಮಿ ಹಾಗೂ ಮಕ್ಕಳು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಂತೆ ಹೇಳಿದ್ದು, ಅದರಂತೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಜಯಲಕ್ಷ್ಮೀ ಮೃತಪಟ್ಟಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮೃತರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿದೆ.